ಸುಟ್ಟು ಕರಕಲಾದ ಕೈಗಾ ಬಸ್: ಮೂವರು ಪಾರು

| Published : Nov 09 2024, 01:00 AM IST

ಸಾರಾಂಶ

ಬಸ್ ವಿರ್ಜೆ ತಲುಪಿದ್ದ ವೇಳೆ ಬಸ್‌ನಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದು, ಬಸ್ಸಿನಿಂದ ಇಳಿದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟುಕರಕಲಾಗಿತ್ತು.

ಕಾರವಾರ: ತಾಲೂಕಿನ ಕೈಗಾ ಎನ್‌ಪಿಸಿಎಲ್‌ ಬಸ್ ವಿರ್ಜೆ ಬಳಿ ಶುಕ್ರವಾರ ನಸುಕಿನಲ್ಲಿ ಬೆಂಕಿಗೆ ಆಹುತಿಯಾಗಿದೆ.

ಕೈಗಾ ಎನ್‌ಪಿಸಿಎಲ್ ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ ಇದಾಗಿದ್ದು, ಅಗ್ನಿ ಅವಘಡದ ವೇಳೆ ಬಸ್ಸಿನಲ್ಲಿ ಚಾಲಕ ಸೇರಿ ಮೂವರು ಮಾತ್ರ ಇದ್ದರು.

ಎಂದಿನಂತೆ ಬಸ್ ಶುಕ್ರವಾರ ನಸುಕಿನಲ್ಲಿ ಉದ್ಯೋಗಿಗಳನ್ನು ಕರೆತರಲು ಟೌನ್‌ಶಿಪ್ ಕಡೆ ಹೊರಟಿತ್ತು. ಈ ಬಸ್ ವಿರ್ಜೆ ತಲುಪಿದ್ದ ವೇಳೆ ಬಸ್‌ನಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದು, ಬಸ್ಸಿನಿಂದ ಇಳಿದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟುಕರಕಲಾಗಿತ್ತು. ೬೦ ಕೆಜಿ ತೂಕದ ಬೃಹದಾಕಾರಾದ ಹೆಬ್ಬಾವು ರಕ್ಷಣೆ

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮ ವ್ಯಾಪ್ತಿಯ ಹುಡೇಲಕೊಪ್ಪ ಬಳಿ ಅಪಾಯಕ್ಕೆ ಸಿಲುಕಿದ್ದ ಸುಮಾರು ೧೩ ಅಡಿ ಉದ್ದ ಹಾಗೂ ಸುಮಾರು ೬೦ ಕೆಜಿ ತೂಕದ ಬೃಹದಾಕಾರಾದ ಹೆಬ್ಬಾವನ್ನು ಪಾಳಾ ಉಪವಲಯ ಅರಣ್ಯಾಧಿಕಾರಿ ಸುನಿಲ್ ಹೊನ್ನಾವರ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶುಕ್ರವಾರ ನಡೆದಿದೆ.ಬೃಹದಾಕಾರಾದ ಹೆಬ್ಬಾವು ಬಲೆಯಲ್ಲಿ ಸಿಲುಕಿ ಪರದಾಡುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಾಳಾ ಉಪವಲಯ ಅರಣ್ಯಾಧಿಕಾರಿ ಸುನಿಲ್ ಹೊನ್ನಾವರ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಸಾರ್ವಜನಿಕರೆದುರು ಪ್ರದರ್ಶಿಸಿ ಬಳಿಕ ಕಾಡಿಗೆ ಬಿಟ್ಟರು.

ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ

ಕಾರವಾರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಹೆಸರು ಕಡಿಮೆ ಮಾಡುವ ಕುರಿತು ನ. ೯, ೧೦ ಹಾಗೂ ನ. ೨೩, ೨೪ ರಂದು ಬೆಳಗ್ಗೆ ೧೦ರಿಂದ ಸಂಜೆ ೫.೩೦ ಗಂಟೆಯವರೆಗೆ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ದಿನಗಳಂದು ಎಲ್ಲ ಮತಗಟ್ಟೆ ಅಧಿಕಾರಿ(ಬಿಎಲ್‌ಒ) ಆಯಾ ಮತಗಟ್ಟೆಯಲ್ಲಿ ಪಾಲ್ಗೊಳ್ಳುವರು. ಈ ವಿಶೇಷ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ಕೋರಿದ್ದಾರೆ.