ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಶನಿವಾರದಿಂದ ಕೈಗಾ ಚಲೋ ಪಾದಯಾತ್ರೆ ಆರಂಭವಾಗಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯ ಹೆಮ್ಮೆ ಎನಿಸಿಕೊಂಡಿರುವ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಸ್ಥಳೀಯ ನಿರಾಶ್ರಿತರಿಗೆ ಉದ್ಯೋಗ ನೀಡುವಲ್ಲಿ ದಶಕಗಳಿಂದ ನಡೆಯುತ್ತಿರುವ ನಿರ್ಲಕ್ಷ್ಯ ಖಂಡಿಸಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಶನಿವಾರದಿಂದ ಕೈಗಾ ಚಲೋ ಪಾದಯಾತ್ರೆ ಆರಂಭವಾಗಿದೆ. ಭೂಮಿ ಕಳೆದುಕೊಂಡ ಕುಟುಂಬಗಳ ಹಕ್ಕೊತ್ತಾಯದ ಈ ನಡಿಗೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.ಶನಿವಾರ ಬೆಳಗ್ಗೆ ಕಾರವಾರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ನೇತೃತ್ವದಲ್ಲಿ ಆರಂಭವಾದ ಈ ಯಾತ್ರೆಯು ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಸಾಗಿತು. ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಸದಾಶಿವಗಡ ಮಾರ್ಗವಾಗಿ ಮುಂದುವರಿಯಿತು.
ಕೈಗಾ ಯೋಜನೆ ಆರಂಭವಾದ ಸಂದರ್ಭದಲ್ಲಿ ಕಾರವಾರ ಭಾಗದ ಅನೇಕ ಬಡ ಕುಟುಂಬಗಳು ತಮ್ಮ ಜಮೀನು ಕಳೆದುಕೊಂಡಿದ್ದವು. ಕನಿಷ್ಠ ಉದ್ಯೋಗವಾದರೂ ಸಿಗಬಹುದು ಎಂಬ ನಿರೀಕ್ಷೆ ಇತ್ತಾದರೂ, ಕಳೆದ 40 ವರ್ಷಗಳಿಂದ ಸ್ಥಳೀಯ ಯುವಕರಿಗೆ ಸೂಕ್ತ ಅವಕಾಶ ದೊರೆತಿಲ್ಲ. ಇದರಿಂದಾಗಿ ಈ ಭಾಗದ ವಿದ್ಯಾವಂತ ಯುವಕರು ಅನಿವಾರ್ಯವಾಗಿ ಗೋವಾ ಮತ್ತು ಮಹಾರಾಷ್ಟ್ರದಂತಹ ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅತಿ ಕಡಿಮೆ ಸಂಬಳಕ್ಕಾಗಿ ಪ್ರತಿನಿತ್ಯ ಸಾವಿರಾರು ಯುವಕರು ಪ್ರಾಣದ ಹಂಗು ತೊರೆದು ಹೊರರಾಜ್ಯಗಳಿಗೆ ಪ್ರಯಾಣಿಸುತ್ತಿರುವುದು ಜಿಲ್ಲೆಯ ದುರಂತವೇ ಸರಿ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.ಪ್ರಸ್ತುತ ಕೈಗಾ ಅಣುವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದೆ ನಡೆಯುವ 300ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಜಿಲ್ಲೆಯ ಸ್ಥಳೀಯ ಯುವಜನತೆಗೆ ಆದ್ಯತೆ ನೀಡಬೇಕು ಹಾಗೂ ನೇಮಕಾತಿ ಪರೀಕ್ಷಾ ಕೇಂದ್ರವನ್ನು ಕಾರವಾರದಲ್ಲೇ ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಾ. 2ರಂದು ಕೈಗಾ ಗೇಟ್ ತಲುಪಲಿರುವ ಪ್ರತಿಭಟನಾಕಾರರು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಈ ಸಂದರ್ಭ ಸಂಜನಾ ನಾಯ್ಕ, ದೀಪಕ್ ಕುಡಾಲಕರ ಸೇರಿದಂತೆ ನೂರಾರು ನಾಗರಿಕರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು.