ಇಂದು‌ ಕೊಡಗಿನಲ್ಲಿ ಕೈಲ್ ಪೊಳ್ದ್ ಹಬ್ಬ ಆಚರಣೆ

| Published : Sep 03 2024, 01:37 AM IST

ಸಾರಾಂಶ

ಕೊಡವರ ಪ್ರಮುಖ ಹಬ್ಬ ಕೈಲ್‌ ಪೊಳ್ದ್‌ ಹಬ್ಬ ಸೆ. 3ರಂದು ಜರುಗಲಿದೆ. ಕೈಲ್‌ ಎಂದರೆ ಆಯುಧ ಪೊಳ್ದ್‌ ಎಂದರೆ ಪೂಜೆ ಎಂಬ ಅರ್ಥವಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೈಲ್ ಪೊಳ್ದ್ ಹಬ್ಬ ಸೆ. 3ರಂದು ಸಂಭ್ರಮದಿಂದ ಜರುಗಲಿದೆ.

ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ, ಪೊಳ್ದ್ ಎಂದರೆ ಪೂಜೆ ಎಂಬ ಅರ್ಥವಿದೆ. ಬತ್ತ ಬೆಳೆಯುವ ಎಲ್ಲ ಕೆಲಸಗಳು ಮುಗಿಯುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ತಂಬಿಟ್ಟು, ಕಡುಂಬಿಟ್ಟು, ರೊಟ್ಟಿ, ಹೋಳಿಗೆ, ಕೇಸರಿಬಾತ್‌, ಹಂದಿ ಮಾಂಸದ ಅಡುಗೆ ಮಾಡಿ ಸವಿಯುತ್ತಾರೆ. ಐನ್ ಮನೆಯಲ್ಲೂ ಹಬ್ಬದ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಕುಟುಂಬಸ್ಥರು ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ನಂತರ ಹಬ್ಬದ ವಿಶೇಷ ಭೋಜನವನ್ನು ಎಲ್ಲರೂ ಸವಿಯುತ್ತಾರೆ.

ಕೊಡವರ ಸಾಂಪ್ರದಾಯಿಕ ಆಯುಧವಾದ ಕೋವಿ, ಒಡಿಕತ್ತಿ ಹಾಗೂ ಇನ್ನಿತರ ಕೃಷಿ ಆಯುಧಗಳನ್ನು ಇಟ್ಟು ಅದಕ್ಕೆ ವಿಶೇಷ ಪಟ್ಟ ತೋಕ್ ಪೂಗಂಧದ ಬೊಟ್ಟನ್ನಿಟ್ಟು, ಅದರ ಮುಂದೆ ಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಭೋಜನವನ್ನಿಟ್ಟು ಕುಟುಂಬದ ಹಿರಿಯರು ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷವಾಗಿದೆ.

--------------------------

ಆರೋಗ್ಯ ತಪಾಸಣಾ ಶಿಬಿರ

ಮಡಿಕೇರಿ: ಪೋಷಣ್ ಮಾಸಾಚರಣೆ ಅಂಗವಾಗಿ ಹದಿಹರೆಯದ ಹೆಣ್ಣು ಮಕ್ಕಳು ಅಂಗನವಾಡಿ ಫಲಾನುಭವಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ರಕ್ತಹೀನತೆ ಪರೀಕ್ಷೆ ನಡೆಸಲಾಯಿತು.

ತಪಾಸಣಾ ಶಿಬಿರದಲ್ಲಿ ಗಾಂಧಿನಗರ, ಶಾಸ್ತ್ರಿನಗರ, ಬಾಡಗ-1, ಬಾಡಗ-2, ಕೋಡಂಬೂರು, ಕಾಂತೂರು, ಕಿಗ್ಗಾಲು, ಐಕೊಳ 1, ಐಕೊಳ 2, ಐಕೊಳ 3 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳು, ಡಾಕ್ಟರ್ ವಿಜಯಕುಮಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೂರ್ನಾಡು, ಹಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆ ಹೇಮಲತಾ, ಆರೋಗ್ಯ ಇಲಾಖೆಯ ಕಾಂಚನ, ಮೇಪಾಡಂಡ ಸವಿತಾ ಕೀರ್ತನ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಹಾಜರಿದ್ದರು.