ಕೈರಂಗಳ: ಯಕ್ಷಗಾನ ಅಕಾಡೆಮಿಯಿಂದ ಯಕ್ಷಧಾರೆ

| Published : Sep 17 2025, 01:08 AM IST

ಸಾರಾಂಶ

ದ.ಕ. ಜಿಲ್ಲೆಯ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಯಕ್ಷಗಾನದ ವಿಭಿನ್ನ ಕಾರ್ಯಗಳನ್ನು ಒಳಗೊಂಡ ‘ಯಕ್ಷಧಾರೆ’ ಕಾರ್ಯಕ್ರಮದ ಸಮಾರೋಪ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಇಂದು ಯಕ್ಷಗಾನ ಕಲೆ ಎಲ್ಲ ರೀತಿಯಿಂದಲೂ ಶ್ರೀಮಂತ ಕಲೆ. ಅದನ್ನು ನಂಬಿದವರ ಕೈ ಬಿಡದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಭಾನುವಾರ ದ.ಕ. ಜಿಲ್ಲೆಯ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಯಕ್ಷಗಾನದ ವಿಭಿನ್ನ ಕಾರ್ಯಗಳನ್ನು ಒಳಗೊಂಡ ‘ಯಕ್ಷಧಾರೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಕ್ಷಗಾನಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ ಅಲ್ಲದೆ ಶ್ರೀಕೃಷ್ಣ ಮಠ, ಎಡನೀರು ಮಠ, ಕಟೀಲು, ಮಂದಾರ್ತಿ ಮೊದಲಾದ ಧಾರ್ಮಿಕ ಸಂಸ್ಥೆಗಳು ನೀಡುತ್ತಿರುವ ಪ್ರೋತ್ಸಾಹ ಅಪಾರ ಎಂದ ಅವರು, ಅಕಾಡೆಮಿ ಇಂದು ಯಕ್ಷಗಾನಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಹಿರಿಯ ಕಲಾವಿದರು, ವಯೋ ನಿವೃತ್ತಿಹೊಂದಿರುವ ಕಲಾವಿದರು, ಮಹಿಳಾ ಕಲಾವಿದರನ್ನು ಕೂಡಾ ಗುರುತಿಸಿ ಅವರಿಗೆ ಪಶಸ್ತಿ ನೀಡುವ ಕಾರ್ಯ ಮಾಡುತ್ತಿದೆ ಎಂದರು.ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನಕ್ಕೆ ಸಂಬಂಧಿಸಿದಂತೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿರುವುದು ಯಕ್ಷಗಾನ ಪ್ರದರ್ಶನಕ್ಕೆ ದೊಡ್ಡ ಹೊಡೆತ ನೀಡಲಿದೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್ ಮಾತನಾಡಿ, ಡಾ. ತಲ್ಲೂರು ಶಿವರಾಮ ಶೆಟ್ಟರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸುವ ಚಿಂತನೆ ನಡೆದಿದೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಲೆ ಹಾಗೂ ಕಲಾವಿದರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರದ ಅಧ್ಯಕ್ಷ ಟಿ.ಜಿ. ರಾಜರಾಮ ಭಟ್, ಮುಡಿಪು ಕುಲಾಲ ಸಂಘ ಅಧ್ಯಕ್ಷ ಪುಂಡರೀಕಾಕ್ಷ ಯು. ಮೂಲ್ಯ ಆನೆಗುಂಡಿ, ಅಕಾಡೆಮಿ ಸದಸ್ಯರಾದ ವಿದ್ಯಾಧರ ರಾವ್ ಜಲವಳ್ಳಿ, ರಾಜೇಶ್ ಕುಳಾಯಿ ಹಾಗೂ ಸುಧಾಕರ ಶೆಟ್ಟಿ ಉಳ್ಳಾಲ ಉಪಸ್ಥಿತರಿದ್ದರು.ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿ ಸದಸ್ಯ ಗುರುರಾಜ ಭಟ್ ಸ್ವಾಗತಿಸಿದರು. ಸಂಧ್ಯಾ ಗುರುರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಥ್ ಮಂಜನಾಡಿ ವಂದಿಸಿದರು.ಯಕ್ಷಧಾರೆಯಲ್ಲಿ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ದಿ. ಬರೆ ಕೇಶವ ಭಟ್ ಅವರ ಸಂಸ್ಮರಣೆ, ಯಕ್ಷ ವಾಚಕ, ಯಕ್ಷ ಆಹಾರ್ಯ, ಬಡಗುತಿಟ್ಟು ಹಾಗೂ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಿತು.