ಸಾರಾಂಶ
ಕಾಲಜ್ಞಾನಿ ಕೈವಾರ ತಾತಯ್ಯ ಬಲಜಿಗ ಸಮುದಾಯಕ್ಕೆ ಮಾತ್ರ ಆಧ್ಯಾತ್ಮ ಗುರುವಾಗದೆ ಇಡೀ ಸಮಾಜಕ್ಕೆ ಗುರುಗಳಾಗಿದ್ದರು. ಅವರ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಕಾಲಜ್ಞಾನಿ ಕೈವಾರ ತಾತಯ್ಯ ಬಲಜಿಗ ಸಮುದಾಯಕ್ಕೆ ಮಾತ್ರ ಆಧ್ಯಾತ್ಮ ಗುರುವಾಗದೆ ಇಡೀ ಸಮಾಜಕ್ಕೆ ಗುರುಗಳಾಗಿದ್ದರು. ಅವರ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.ನಗರದ ಲಕ್ಷ್ಮೀ ನಾರಾಯಣ ಸಮುದಾಯ ಭವನದಲ್ಲಿ ಶ್ರೀ ಕೈವಾರ ತಾತಯ್ಯ ಜಯಂತೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ಕೈವಾರ ತಾತಯ್ಯ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿ ಕತ್ತಲೆಯಿಂದ ಬೆಳಕಿಗೆ ತಂದ ಮಹಾಸತ್ಪುರುಷರು ಎಂದು ಬಣ್ಣಿಸಿದರು.
ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಮಕ್ಕಳಲ್ಲಿ ಆಚಾರ ವಿಚಾರಗಳು ಕ್ಷೀಣಿಸುತ್ತಿವೆ. ಆದ್ದರಿಂದ ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ಕಲಿಸಬೇಕು. ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.ಪರಶುರಾಮರ ಮಠದ ಮುಖ್ಯಸ್ಥರಾದ ಮದ್ದೇ ರಾಮಚಂದ್ರಪ್ಪ ಮಾತನಾಡಿ, ಕೈವಾರ ತಾತಯ್ಯನವರು ಕನ್ನಡ, ತೆಲಗು ಹಾಗೂ ಸಂಸ್ಕೃತ ಭಾಷೆಗಳಲ್ಲಿ ಮಹಾನ್ ಪಾಂಡಿತ್ಯ ಗಳಿಸಿದ್ದರು. ಸಮಾಜದ ಜಾಗೃತಿಗಾಗಿ ನೂರಾರು ಕೀರ್ತನೆಗಳನ್ನು ರಚಿಸಿದ್ದರು ಎಂದರು.
ಬಲಿಜ ಸಂಘದ ಜಿಲ್ಲಾಧ್ಯಕ್ಷರಾದ ಆರ್.ವಿ. ಸುರೇಶ್ ಮಾತನಾಡಿ, ನಮ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ ಯಾವುದೇ ತಾರತಮ್ಯವಿಲ್ಲದೆ ನಾವೆಲ್ಲರೂ ಸಮಾನವಾಗಿ ಸಂಘಟಿತರಾಗಬೇಕು ಹಾಗೂ ತಾತಯ್ಯನವರ ಜಯಂತಿಗೆ ಇನ್ನು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ಕೈವಾರ ತಾತಯ್ಯನವರು ಪವಾಡ ಪುರುಷರು, ಅವರಿಗೆ ದೇವನುದೇವತೆಗಳು ಆಶೀರ್ವಾದ ಇದ್ದು ಅವರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎಂದು ಹೇಳಿದರು.
ಬಲಿಜ ಮಹಿಳಾ ಸಂಘದ ಗೌರವಧ್ಯಕ್ಷರಾದ ವನಜಮ್ಮ, ಗುರುಗಳಾದ ಕಿಟ್ಟಪ್ಪ ಮಾತನಾಡಿದರು. ಬಲಿದ ಸಮುದಾಯದ ತಾಲೂಕು ಅಧ್ಯಕ್ಷ ಹನುಮಶೆಟ್ಟಿ, ಗೌರವಾಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷರಾದ ಮೋಹನ್ ರಾಮ್ , ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.ಕೈವಾರ ತಾತಯ್ಯನವರ ರಥೋತ್ಸವ
ಕೈವಾರ ತಾತಯ್ಯನವರ ರಥೋತ್ಸವವು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಿಂದ ಉತ್ಸವಮೂರ್ತಿಯನ್ನು ಮೆರವಣಿಗೆಯಲ್ಲಿ ಭಜನೆ, ವಾಧ್ಯ, ಕುಂಭಮೇಳ ಮತ್ತು ಜಾನಪದ ಕಲಾತಂಡಗಳೊಂದಿಗೆ ಶ್ರೀರಾಮಚಿತ್ರಮಂದಿರದ ರಸ್ತೆ ಮಾರ್ಗವಾಗಿ ಎಂ.ಜಿ.ರಸ್ತೆ ಮುಖಾಂತರ, ಕಾಮನಗುಡಿ ವೃತ್ತ, ಮುಖ್ಯರಸ್ತೆ ಮಾರ್ಗವಾಗಿ ಹಳೇ ಬಸ್ನಿಲ್ದಾಣ ಬಳಸಿ, ಛತ್ರದ ಬೀದಿ, ಅಗ್ರಹಾರ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ಸ್ವಸ್ಥಾನಕ್ಕೆ ರಥೋತ್ಸವವು ತಲುಪಿತು.