ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾನವರೆಲ್ಲರೂ ಒಂದೇ. ಮನುಕುಲದ ಉದ್ದಾರವೇ ಶ್ರೇಷ್ಟ ಎಂದು ಕೈವಾರ ತಾತಯ್ಯನವರು ನಂಬಿದ್ದು, ಮನುಕುಲದ ಉದ್ದಾರದ ಕುರಿತು ಸಾಕಷ್ಟು ಕೀರ್ತನೆಗಳನ್ನು ರಚಿಸಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಮರಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಉದ್ಘಾಟಿಸಿ ಮಾತನಾಡಿದರು.

ತಾತಯ್ಯನವರು ದೇವರ ವಿಶೇಷ ಸೃಷ್ಠಿ. ಅವರು ಭಗವಂತನ ಸ್ವರೂಪ. ಪ್ರತಿಯೊಬ್ಬ ಮನುಷ್ಯ ಸಂಸ್ಕೃತಿಯನ್ನು ಅರಿತಿರಬೇಕು. ಗ್ರಾಮದ ಲೆಕ್ಕಿಗ ಭ್ರಷ್ಟನಾಗಿರಬಾರದು ಎಂದು ಅಂದೇ ಹೇಳಿದ್ದರು. ಬದುಕು ಹೇಗಿರಬೇಕು ಎಂದು ತಿಳಿಸಿಕೊಟ್ಟ ಸಾಂಸ್ಕೃತಿಕ ಹರಿಕಾರರಾದ ಇವರು ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಮನುಕುಲದ ಉದ್ದಾರವೇ ಶ್ರೇಷ್ಠವೆಂದು ನಂಬಿದ್ದರು. ಸರಳ ಕನ್ನಡದಲ್ಲಿ ತತ್ವಪದಗಳು ಮತ್ತು ಕಾಲಜ್ಞಾನವನ್ನು ರಚಿಸಿ, ಭವಿಷ್ಯದ ಘಟನೆಗಳನ್ನು ಮುನ್ನರಿತಿದ್ದರು. ಇವರ ಕೀರ್ತನೆಗಳು ಭಕ್ತಿ, ಯೋಗ ಮತ್ತು ವೇದಾಂತದ ಸಾರವನ್ನು ಒಳಗೊಂಡಿವೆ ಎಂದರು.

ಮನುಕುಲದ ಏಳಿಗೆಗೋಸ್ಕರ ಚಿಂತಿಸಿದ ಇಂತಹ ಮಹಾನ್ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಆಗಬಾರದು. ಇಡೀ ಸಮಾಜಕ್ಕೆ ಇವರು ಸೇರಿದವರು. ಇವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು. ಬಲಿಜ ಸಮಾಜ ಸ್ವಾವಲಂಬಿ ಸಮಾಜವಾಗಿದ್ದು, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.


ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಮಾತನಾಡಿ, ಇಡೀ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಇಂತಹ ಮಹಾನ್ ಸಾಧಕರ ಸಂದೇಶಗಳು, ತತ್ವ, ಆದರ್ಶಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಜಯಂತಿಗಳನ್ನು ಆಚರಿಸುತ್ತಿದೆ. ಕೈವಾರ ತಾತಯ್ಯನವರು ಎಲ್ಲ ಹೆಣ್ಣುಮಕ್ಕಳನ್ನು ತಾಯಿ ಸಮಾನ ಕಾಣುತ್ತಿದ್ದರು, ಬಳೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಾ, ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆ ಸಾರುವ ಕೆಲಸ ಮಾಡಿದ್ದಾರೆ. ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಬಲಿಜ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯಬೇಕು ಎಂದರು.

ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕ ಡಾ. ಛಾಯಾಕುಮಾರಿ ವಿಶೇಷ ಉಪನ್ಯಾಸ ನೀಡಿ, ಸಮಾಜ ಸುಧಾರಕರಾದ ತಾತಯ್ಯನವರು ದೈವೀ ಪವಾಡದಿಂದ ಮುದ್ದಮ್ಮ ಮತ್ತು ಕೊಂಡಪ್ಪ ದಂಪತಿಗೆ ಜನಿಸುತ್ತಾರೆ. ಇವರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರೊಂದು ಅಗಾಧವಾದ ಸಮುದ್ರ ಎಂದು ಹೇಳಿದರು.

ಜೀವನ ನಿರ್ವಹಣೆಗಾಗಿ ಬಳೆ ಮಾರುವ ವೃತ್ತಿ ಕೈಗೊಂಡರು. ಹಣದ ಬೆನ್ನತ್ತದೆ, ಶುದ್ಧ ಭಾವದಿಂದ ಬಳೆ ಮಾರುತ್ತಿದ್ದ ಇವರಿಗೂ ಪತ್ನಿಗೂ ವಿರಸ ಉಂಟಾಗುತ್ತದೆ. ಒಮ್ಮೆ ಬಳೆ ಮಾರಲು ಹೋದಾಗ ಎದುರಾದ ಪರದೇಶಿ ಸ್ವಾಮಿಗಳಿಂದ ಓಂ ನಮೋ ನಾರಾಯಣಾಯ ಎಂಬ ಮಂತ್ರೋಪದೇಶ ಪಡೆಯುತ್ತಾರೆ. ನಂತರ ಬೆಣಚುಕಲ್ಲೊಂದನ್ನು ಬಾಯಲ್ಲಿಟ್ಟುಕೊಂಡು ಕೈವಾರದ ನರಸಿಂಹ ಗುಹೆಯಲ್ಲಿ ಮೂರು ವರ್ಷ ಕಠಿಣ ತಪಸ್ಸು ಮಾಡಿ ದೈವ ಸಾಕ್ಷಾತ್ಕಾರ ಪಡೆಯುತ್ತಾರೆ. ಆಗ ಬಾಯಲ್ಲಿದ್ದ ಕಲ್ಲು ಸಕ್ಕರೆಯಾಗಿ ಬದಲಾಗುತ್ತದೆ. ನಂತರ ಯೋಗಿ ನಾರೇಯಣ ಎಂದು ಪ್ರಸಿದ್ದರಾದ ಅವರು ಮುಂದೆ ಪವಾಡ ಪುರುಷರಾಗುತ್ತಾರೆ. ಮನುಷ್ಯನ ಅಹಂ ಎಂಬ ಅಂಧಕಾರ ಸಕ್ಕರೆಯಂತೆ ಕರಗಬೇಕು. ಜ್ಞಾನ ಜ್ಯೋತಿ ಬೆಳಗಬೇಕು. ಜ್ಞಾನ, ದಯೆ, ಸಹಬಾಳ್ವೆ, ಸಂಸ್ಕಾರ ಕೊಡುವಂತಹದ್ದೇ ನಿಜವಾದ ಶಿಕ್ಷಣ ಎಂದು ಹೇಳಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಎಸ್.ಎನ್.ವೆಂಕಟೇಶ್, ಕಾರ್ಯದರ್ಶಿ ಡಾ.ಬಿ.ಆರ್.ಶಿವಕುಮಾರ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.