ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶ್ರೀ ಯೋಗಿ ನಾರೇಯಣ ಯತೀಂದ್ರರು (ಕೈವಾರ ತಾತಯ್ಯ) ಕೇವಲ ಒಬ್ಬ ಯೋಗಿಯಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿಯ ಮಹಾನ್ ಪುರುಷರಾಗಿದ್ದರು. ಕನ್ನಡ, ಸಂಸ್ಕೃತ ಮತ್ತು ತೆಲುಗಿನಲ್ಲಿ ಅಮೂಲ್ಯವಾದ ತತ್ವಪದಗಳನ್ನು ರಚಿಸಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹಾಗೂ ಸಾಹಿತಿ ಹುರುಳಿ ಎಂ.ಬಸವರಾಜ ಹೇಳಿದರು.ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾದ ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹುಟ್ಟುತ್ತಲೇ ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದ ಇವರನ್ನು ಗ್ರಾಮಸ್ಥರು ಸಾಕಿದರು. ಬೆಳದ ಮೇಲೆ ಕುಲ ಕಸುಬು ಬಳೆ ಮಾರುವ ವೃತ್ತಿಯಲ್ಲಿ ತೊಡಗಿದರು. ಇವರ ಹೆಂಡತಿ ಮುನಿಯಮ್ಮ ನಾರೇಯಣರನ್ನು ದುಡಿಮೆ ಕಾರಣದಿಂದಾಗಿ ನಿತ್ಯವು ನಿಂದನೆ ಮಾಡುತ್ತಿದ್ದಳು. ಒಮ್ಮೆ ಪರದೇಶಿ ಸ್ವಾಮಿಗಳ ಕೃಪಾದೃಷ್ಟಿ ಹಾಗೂ ಸಂಸರ್ಗದಿಂದ ಯೋಗಿ ನಾರೇಯಣರ ಮೈಯಲ್ಲಿ ಶಕ್ತಿ ಸಂಚಾರವಾಗಿ ಆಧ್ಯಾತ್ಮಕ ಭಾವನೆ ಜಾಗೃತಗೊಂಡು ಸಂಸಾರಿಕ ಜೀವನ ತೊರೆದರು. ತೆಲುಗು ಸೇರಿದಂತೆ ಕನ್ನಡದಲ್ಲಿ ಹಲವು ಕೃತಿಗಳನ್ನು ಕೈವಾರ ತಾತಯ್ಯ ರಚಿಸಿದ್ದಾರೆ. ಸುಲಲಿತ ಹಾಗೂ ಸುಂದರ ತೆಲುಗು ಭಾಷೆಯಲ್ಲಿ ವೇದಾಂತ ಸಾರಾವಳಿ, ನಾದಬ್ರಹ್ಮಾನಂದ ನಾರೇಯಣ ಕವಿ ತ್ರಿಶತಕ, ಅಮರ ನಾರಾಯಣ ಕವಿ ಶತಕ, ವೀವಲಿಂಗ ಶತಕ, ತಾರಕ ಬ್ರಹ್ಮಾನಂದ ಶತಕ, ಶ್ರೀ ಕೃಷ್ಣ ಚರಿತ, ಶ್ರೀ ಕೃಷ್ಣ ತತ್ವಾಂಮೃತ, ಶ್ರೀಕೃಷ್ಣ ಸಿದ್ಧಾಂತ ಯೋಗಸಾರ, ಕಾಲಜ್ಞಾನ ಸೇರಿದಂತೆ ಆತ್ಮಬೋಧಾಮೃತಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಕೈವಾರ ತಾತಯ್ಯ ರಚನೆಯ ನಾಲ್ಕು ಹಾಗೂ ಐದು ಸಾಲಿನ ಹಲವು ಪದ್ಯಗಳು ಲಭಿಸಿವೆ. ಶ್ರೀ ಯೋಗಿ ನಾರೇಯಣ ಯತೀಂದ್ರರು ಭವಿಷ್ಯತ್ತಿನ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಮುನ್ಸೂಚಿಸುವ ‘ಕಾಲಜ್ಞಾನ''''ವನ್ನು ರಚಿಸಿದ್ದರು ಎಂದು ಸಾಹಿತಿ ಹುರುಳಿ ಎಂ. ಬಸವರಾಜ ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಕೈವಾರ ಕ್ಷೇತ್ರವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಅಲ್ಲಿನ ಗದ್ದುಗೆ ಮತ್ತು ತಾತಯ್ಯನವರ ತತ್ವಗಳೇ ಕಾರಣ. ಬಲಿಜ ಸಮಾಜವು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ಬಳೆಗಾರ ವೃತ್ತಿಯು ಅತ್ಯಂತ ಪವಿತ್ರವಾದುದು. ಸಮಾಜದ ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೂ ಬಳೆಗಾರರ ಉಪಸ್ಥಿತಿ ಮತ್ತು ಅವರು ತೊಡಿಸುವ ಬಳೆಗಳು ಮಂಗಳಕರ ಸಂಕೇತಗಳಾಗಿವೆ.
ಬಲಿಜ ಸಮಾಜವು 3ಬಿ ವರ್ಗದ ಅಡಿಯಲ್ಲಿ ಒಕ್ಕಲಿಗ ಮತ್ತು ರೆಡ್ಡಿ ಸಮುದಾಯಗಳ ಜೊತೆ ಹೋರಾಟ ನಡೆಸಿ ಮೀಸಲಾತಿಯನ್ನು ಪಡೆದುಕೊಂಡಿದೆ. ಇದರಿಂದ ಸಮಾಜದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅನುಕೂಲವಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿವೆ. ಸಮಾಜದ ಬಾಂಧವರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು. ಸಮಾಜದ ಬಾಂಧವರು ಕೇವಲ ವೃತ್ತಿಗೆ ಸೀಮಿತವಾಗದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಗೋವಿಂದರಾಜು, ಸರ್ಕಾರವು ಸುಮಾರು 35 ರಿಂದ 36 ದಾರ್ಶನಿಕರ ಜಯಂತಿಗಳನ್ನು ಆಚರಿಸುವ ಮೂಲಕ ಆಯಾ ಸಮುದಾಯಗಳ ಮಹಾನ್ ವ್ಯಕ್ತಿಗಳನ್ನು ಗೌರವಿಸುತ್ತಿದೆ. ಈ ಪರಂಪರೆಯ ಭಾಗವಾಗಿ ಬಲಿಜ ಸಮುದಾಯದ ಕೈವಾರ ತಾತಯ್ಯನವರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿರುವುದು ಶ್ಲಾಘನೀಯ. ಈ ಹಿಂದೆ ಬಳೆಗಾರ ವೃತ್ತಿ ಮಾತ್ರ ಸೀಮಿತವಾಗಿದ್ದ ಬಲಿಜ ಸಮಾಜದ ಪರಿಸ್ಥಿತಿ ಇಂದು ಬದಲಾಗಿದೆ. ಶಿಕ್ಷಣ ಪಡೆದ ನಂತರ ಸಮುದಾಯದವರು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಶ್ರೀ ಯೋಗಿನಾರಾಯಣ ಯತೀಂದ್ರ ಬಲಿಜ ಸಂಘ ಅಧ್ಯಕ್ಷ ಎಂ.ಎ. ಸೇತುರಾಮ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಇದೇ ವೇಳೆ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಸ್ವಾಗತ ಕೋರಿದರು. ಚಿತ್ರದುರ್ಗದ ಹರೀಶ್ ಮತ್ತು ತಂಡದವರು ನಾಡಗೀತೆ ಪ್ರಸ್ತುತ ಪಡಿಸುವುದರೊಂದಿಗೆ ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.ತಾಲೂಕು ಯೋಗಿನಾರಾಯಣ ಯತೀಂದ್ರ ಬಲಿಜ ಸಂಘ ಅಧ್ಯಕ್ಷ ಎಂ.ಜಿ.ಸೂರ್ಯನಾರಾಯಣ, ಯೋಗಿನಾರಾಯಣ ಸೌಹಾರ್ದ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಪ್ರಹ್ಲಾದ್, ಬೊಮ್ಮೇನಹಳ್ಳಿಯ ಶ್ರೀ ಯೋಗಿನಾರಾಯಣ ಯತೀಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ಎಸ್.ಸೋಮಶೇಖರ್, ಬಲಿಜ ಸಂಘದ ಮುಖಂಡರಾದ ಸಣ್ಣ ಎಲ್ಲಪ್ಪ, ವೀರೂಪಾಕ್ಷಪ್ಪ ಬೊಮ್ಮೇನಹಳ್ಳಿ, ಜಿಲ್ಲಾ ಪಂಚಾಯತಿ ಸಹಾಯಕ ನಿರ್ದೇಶಕ ದಾದಾಪೀರ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಭವ್ಯ ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ಕೈವಾರ ತಾತಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮೆರವಣಿಗೆ ಚಾಲನೆ ನೀಡಲಾಯಿತು. ನಗರದ ಗಾಂಧಿವೃತ್ತ, ಎಸ್‌ಬಿಐ ಹಾಗೂ ಮದಕರಿ ನಾಯಕ ವೃತ್ತದವರೆಗೆ ಮೆರವಣಿಗೆ ಸಾಗಿ ವಾಲ್ಮೀಕಿ ಭವನ ತಲುಪಿತು. ಕೈವಾರ ತಾತಯ್ಯ ಭಾವಚಿತ್ರದೊಂದಿಗೆ ಜ್ಯೋತಿ ಬಾ ಫುಲೆ ಹಾಗೂ ಸಾವಿತ್ರಿ ಬಾಯಿ ಪುಲೆ, ವಿಜಯನಗರ ಅರಸ ಕೃಷ್ಣದೇವರಾಯ, ಪೌರಾಣಿಕ ವ್ಯಕ್ತಿ ಬಲಿ ಚರ್ಕವರ್ತಿ ಭಾವಚಿತ್ರಗಳನ್ನು ಸಹ ಮೆರವಣಿಗೆ ಮಾಡಲಾಯಿತು.