ಕೈವಾರ ತಾತಯ್ಯ ಅಂತರಂಗದ ಸಾಧಕ ಋಷಿ

| Published : Mar 25 2024, 12:51 AM IST

ಸಾರಾಂಶ

ಜ್ಞಾನ ಸಂಪ್ರಾಪ್ತಿಯಿಂದ ಪರಮಾತ್ಮನಲ್ಲಿ ಸ್ಥಿರವಾಗಿ ನಿಶ್ಚಲತ್ವ ಉಂಟಾದ ನಂತರ ಕರ್ಮಗಳು ನಾಶವಾಗುತ್ತದೆ. ಚಂಚಲವಾದ ಬುದ್ಧಿ ಮತ್ತು ಮನೋವಿಕಾರಗಳು ದಮನವಾಗಬೇಕಾದರೆ ಆತ್ಮದ ಚಿಂತನೆಯನ್ನು ಮಾಡುತ್ತಾ ಜ್ಞಾನವನ್ನುಗಳಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಗುರು ಉಪದೇಶದಿಂದ ಆತ್ಮಪ್ರಕಾಶವೆಂದು ಸಾರಿರುವ ಕೈವಾರದ ತಾತಯ್ಯನವರು ಅಂತರಂಗದ ಸಾಧಕ ಋಷಿಮುನಿಗಳು. ಮರುಜೀವವನ್ನು ಸೃಷ್ಟಿಸುವ ಶಕ್ತಿಯನ್ನು ತಾತಯ್ಯನವರು ಪಡೆದಿದ್ದರೆಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಕೈವಾರ ತಾತಯ್ಯನವರ ಜಯಂತಿಯ ಪ್ರಯುಕ್ತ ಶ್ರೀಯೋಗಿನಾರೇಯಣ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆತ್ಮಬೋಧಾಮೃತ ಪ್ರವಚನವನ್ನು ನೀಡಿ ಮಾತನಾಡಿ ಆತ್ಮಬೋಧಾಮೃತದಲ್ಲಿ ತಾತಯ್ಯನವರು ಗುರುವಿನ ಮಹತ್ವವನ್ನು ಸಾರಿ ಸಾರಿ ಹೇಳಿದ್ದಾರೆ ಎಂದರು.

ಆತ್ಮಚಿಂತನೆಯಿಂದ ಜ್ಞಾನ ಸಿದ್ಧಿ

ಜ್ಞಾನ ಸಂಪ್ರಾಪ್ತಿಯಿಂದ ಪರಮಾತ್ಮನಲ್ಲಿ ಸ್ಥಿರವಾಗಿ ನಿಶ್ಚಲತ್ವ ಉಂಟಾದ ನಂತರ ಕರ್ಮಗಳು ನಾಶವಾಗುತ್ತದೆ. ಚಂಚಲವಾದ ಬುದ್ಧಿ ಮತ್ತು ಮನೋವಿಕಾರಗಳು ದಮನವಾಗಬೇಕಾದರೆ ಆತ್ಮದ ಚಿಂತನೆಯನ್ನು ಮಾಡುತ್ತಾ ಜ್ಞಾನವನ್ನುಗಳಿಸಿಕೊಳ್ಳಬೇಕು. ಎಂದಿಗಾದರೆ ಆತ್ಮಚಿಂತನೆ ಉಂಟಾಗುವುದೋ ಆಗ ಮಾತ್ರ ಜ್ಞಾನವು ಸಿದ್ಧಿಸುತ್ತದೆ. ಪರಮಾತ್ಮನ ವಿಚಾರವನ್ನು ಸದಾಕಾಲ ಚಿಂತನೆ ಮಾಡುವುದರಿಂದ ಇಂದ್ರಿಯಗಳನ್ನು ನಿಗ್ರಹಿಸಬಹುದೆಂದರು.

ಕೈವಾರ ತಾತಯ್ಯನವರು ರಚಿಸಿರುವ ಬ್ರಹ್ಮಾಂಡಪುರಿ ಶತಕದ ಕುರಿತಾಗಿ ಉಪನ್ಯಾಸ ನೀಡಿದ ಡಾ||ಜೋಸ್ಯುಲ ಸದಾನಂದಶಾಸ್ತ್ರೀಗಳು ಮಾತನಾಡಿ ವಿಶ್ವದಲ್ಲೇ ಆಧ್ಯಾತ್ಮ ಸಾಧನೆಗೆ ಅತ್ಯಂತ ಅನುಕೂಲವಾದ ಪುಣ್ಯಭೂಮಿ ಭಾರತಭೂಮಿ. ಸಾವಿರಾರು ವರ್ಷಗಳ ಕಾಲ ಸ್ವರ್ಗದಲ್ಲಿರುವುದಕ್ಕಿಂತ ಮೋಕ್ಷಕ್ಕೆ ಕಾರಣವಾಗುವ ಭಾರತದೇಶದಲ್ಲಿ ಒಂದು ಕ್ಷಣ ಆಯುಷ್ಯ ಪಡೆದರೂ ಸಾಕು ಎನ್ನುತ್ತದೆ ಭಾಗವತ. ಕೈವಾರ ತಾತಯ್ಯನವರು ಜೀವನದಲ್ಲಿ ಉಂಟಾದ ಲೌಕಿಕ ಸಂಸಾರಿಕ ವಿಷಾದ ಅವರನ್ನು ಗುರುವಾಗಿ ಬಂದ ಅಮರನಾರೇಯಣಸ್ವಾಮಿಯ ಬೋಧೆಯಿಂದ ಯೋಗಿಪುಂಗವರನ್ನಾಗಿಸಿತೆಂದರು.

ಸದ್ಗುರು ತಾತಯ್ಯನವರನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ತಾತಯ್ಯನವರನ್ನು ಪೀಠದಲ್ಲಿ ಆಸೀನಗೊಳಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವಿವಿಧ ಭಜನಾ ಮಂಡಳಿಯವರಿಂದ ಸಾಮೂಹಿಕ ನಾಮ ಸಂಕೀರ್ತನೆ, ಆದಿಚುಂಚನಗಿರಿ ಮಠದ ಶ್ರೀ ಸಾಯಿಕೀರ್ತಿನಾಥಸ್ವಾಮಿಯವರಿಂದ ಗಾಯನ , ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಗಾಯನ, ಪದ್ಮಿನಿ ಎಸ್.ಉಪಾಧ್ಯ ತಂಡದವರಿಂದ ಕೈವಾರ ತಾತಯ್ಯನವರ ಜೀವನ ಚರಿತ್ರೆ ನೃತ್ಯ ರೂಪಕವನ್ನು ಹಮ್ಮಿಕೊಳ್ಳಲಾಗಿತ್ತು.

ಕೈವಾರ ಮಠ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಂಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರುಗಳಾದ ಕೆ.ನರಸಿಂಹಪ್ಪ, ಗಣೇಶ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್, ಕೆ.ವಿ.ಸುರೇಶ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಹಿರಿಯ ವಕೀಲ ಅಶ್ವಥನಾರಾಯಣ್ ಉಪಸ್ಥಿತರಿದ್ದರು.

ಕೈವಾರದಲ್ಲಿ ಇಂದು

ಸೋಮವಾರ ೨೫.೩.೨೦೨೪ ಬೆಳಿಗ್ಗೆ ೮ ಗಂಟೆಗೆ ಶ್ರೀದೇವಿ ಭೂದೇವಿ ಸಮೇತ ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಹಮ್ಮಿಕೊಳ್ಳಲಾಗಿದೆ. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಅಮರನಾರೇಯಣಸ್ವಾಮಿ ದೇವಾಲಯಕ್ಕೆ ಸಂಕೀರ್ತನೆಯೊಂದಿಗೆ ಕರೆತರಲಾಗುವುದು. ರಾತ್ರಿ ೯ ಗಂಟೆಗೆ ವಿದುಷಿ ತೆನಾಲಿ ನಾಗಮಣಿ ಭಾಗವತಾರಿಣಿ ರವರಿಂದ ಹರಿಕಥೆ, ವಿದ್ವಾನ್ ಎ.ಎಲ್.ವೆಂಕಟೇಶ್ ತಂಡವರಿಂದ ಬುರ್ರಕಥೆ ಇರುತ್ತದೆ.