ಬಸವರಾಜ ಹಿರೇಮಠ
ಧಾರವಾಡಒಂದು ಸಮಯದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮ, ರಂಗ ಚಟುವಟಿಕೆ ಹಾಗೂ ರಾಜಕೀಯ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಡಾ. ಮಲ್ಲಿಕಾರ್ಜುನ ಮನಸೂರ ಹೆಸರಿನ ಕಲಾಭವನದ ಸಭಾಂಗಣವು ಎರಡು ದಶಕಗಳಿಂದ ಅನಾಥ ಪ್ರಜ್ಞೆ ಅನುಭವಿಸುತ್ತಿದೆ.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಲಾಭವನ ಶಿಥಿಲಾವಸ್ಥೆಗೆ ತಲುಪಿದ್ದು, ಪುನಶ್ಚೇತನಕ್ಕೆ ಈ ಭವನದ ಜವಾಬ್ದಾರಿ ಹೊತ್ತ ಹು-ಧಾ ಮಹಾನಗರ ಪಾಲಿಕೆಯು ಪರದಾಡುತ್ತಿದೆ.1950ರ ದಶಕದಲ್ಲಿ ನಿರ್ಮಿಸಲಾದ ಕಲಾಭವನ 2000ರ ಆರಂಭದಲ್ಲಿ ಕ್ಷೀಣಿಸಲು ಪ್ರಾರಂಭಿಸಿತು. ಮುರಿದ ಆಸನ, ಶಿಥಿಲಗೊಂಡ ಚಾವಣಿ ಮತ್ತು ನಿರ್ವಹಣೆ ಇಲ್ಲದೇ ಕಟ್ಟಡ ಸೊರಗಿತ್ತು. ಅಂತಿಮವಾಗಿ 2005ರಲ್ಲಿ ಸುರಕ್ಷತಾ ಕಾರಣಗಳಿಗಾಗಿ ಅದನ್ನು ಮುಚ್ಚಬೇಕಾಯಿತು. ಸಾರ್ವಜನಿಕರ ತೀವ್ರ ಒತ್ತಡದ ಫಲವಾಗಿ 2010ರಲ್ಲಿ ರಾಜ್ಯ ಸರ್ಕಾರವು ನವೀಕರಣಕ್ಕಾಗಿ ಹಣ ಮಂಜೂರು ಮಾಡಿತು. ನಿರ್ಮಿತಿ ಕೇಂದ್ರವು ನವೀಕರಣದ ಜವಾಬ್ದಾರಿ ಹೊತ್ತಿತ್ತು. ಸುಮಾರು ಏಳು ವರ್ಷಗಳ ವಿಳಂಬದ ನಂತರ, ₹7 ಕೋಟಿ ವೆಚ್ಚದಲ್ಲಿ ನವೀಕರಿಸಿದ ಕಲಾಭವನವನ್ನು 2017ರಲ್ಲಿ ಮತ್ತೆ ತೆರೆಯಲಾಯಿತು. ಆದರೆ, ಅದರ ದುಬಾರಿ ಬಾಡಿಗೆ ಹಾಗೂ ಇತರೆ ಕಾರಣಗಳಿಂದಾಗಿ ಬರೀ ಎರಡ್ಮೂರು ಕಾರ್ಯಕ್ರಮಗಳಿಗೆ ಮಾತ್ರ ಸಾಕ್ಷಿಯಾದ ಕಲಾಭವನ ಬಾಗಿಲು ಮುಚ್ಚಿದ್ದು, ಮತ್ತೆ ತೆರೆದಿಲ್ಲ. ಇದರಿಂದ ಧಾರವಾಡದಲ್ಲಿ ದೊಡ್ಡ ಸಂಖ್ಯೆಯ ಸಂಗೀತ, ನಾಟಕ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಭಾಂಗಣದ ಕೊರತೆ ತೀವ್ರವಾಗಿ ಕಾಡುತ್ತಿದೆ.
ಕಲಾಭವನದಲ್ಲಿ ಪ್ರದರ್ಶನ ನೀಡುವುದು ಒಂದು ಕಾಲದಲ್ಲಿ ಗೌರವ ಎಂದು ಪರಿಗಣಿಸಲಾಗಿತ್ತು. ಜತೆಗೆ ಕಲಾವಿದರಿಗೆ ಕೈಗೆಟುಕುವ ದರದಲ್ಲಿ ಈ ವೇದಿಕೆ ಲಭ್ಯವಾಗಿತ್ತು. ಆದರೆ, ಈಗ ದುಬಾರಿ ಬಾಡಿಗೆ ದರದಲ್ಲಿ ಸಂಗೀತ, ನಾಟಕ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕಾದ ಸ್ಥಿತಿ ಉಂಟಾಗಿದೆ ಎಂದು ರಂಗ ಕಲಾವಿದ ರವಿ ಕುಲಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ, ಮೇಯರ್ ಆಗಿದ್ದ ಅವಧಿಯಲ್ಲಿ ಕಲಾಭವನ ನವೀಕರಣಕ್ಕೆ ಪ್ರಯತ್ನಗಳು ನಡೆದವು. ಆದಾಗ್ಯೂ, ತಾಂತ್ರಿಕ ಕಾರಣದಿಂದ ಪೂರ್ಣ ಸಾಧ್ಯವಾಗಲಿಲ್ಲ. ಸದ್ಯ ಭವನದ ಆವರಣದಲ್ಲಿ ಟೈಲ್ಸ್ ಕಾರ್ಯ ಮಾತ್ರ ಪ್ರಗತಿಯಲ್ಲಿದೆ. ಕಲಾಭವನದ ಸಾಂಸ್ಕೃತಿಕ ಪರಂಪರೆ ಕಾಪಾಡಲು ಪಾಲಿಕೆಯು ಇದೀಗ ಸಮಗ್ರ ಪುನರಾಭಿವೃದ್ಧಿ ಯೋಜಿಸುತ್ತಿದೆ. ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ₹ 100 ಕೋಟಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಈರೇಶ ಅಂಚಟಗೇರಿ ಮಾಹಿತಿ ನೀಡಿದರು.
ಈ ಮಧ್ಯೆ ಸಾಮಾಜಿಕ ಕಾರ್ಯಕರ್ತ ಶ್ರೀಶೈಲಗೌಡ ಕಮತರ್, ಧಾರವಾಡ ಅಂತಹ ಸಾಂಸ್ಕೃತಿಕ, ಶೈಕ್ಷಣಿಕ ನಗರಿಯಲ್ಲಿ ಒಂದು ಸಾರ್ವಜನಿಕ ಸಭಾಂಗಣ ಇಲ್ಲದೇ ಇರುವುದು, ಇದ್ದರೂ ಅದರ ಪ್ರಯೋಜನ ಇಲ್ಲದಿರುವುದು ಸ್ಥಳೀಯ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಅವಳಿ ನಗರದ ಅಭಿವೃದ್ಧಿಗೆ ಏನೂ ಕೊಡುಗೆ ನೀಡದೇ ಬರೀ ಪ್ರಚಾರಕ್ಕೆ ಬಿದ್ದಿರುವ ಜನಪ್ರತಿನಿಧಿಗಳು ಇನ್ನಾದರೂ ಕಲಾಭವನ ನವೀಕರಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಮನಸ್ಸು ಮಾಡಬೇಕು ಎಂದು ಆಗ್ರಹಿಸುತ್ತಾರೆ. ಪ್ರಸ್ತಾವಿತ ಯೋಜನೆ..ಸದ್ಯದ ಕಲಾಭವನ ಕಟ್ಟಡ ಸಂಪೂರ್ಣ ತೆರವುಗೊಳಿಸಿ ಆಧುನಿಕ ಸಂಕೀರ್ಣದೊಂದಿಗೆ ಬದಲಾಯಿಸುವುದು. ಹೊಸ ವಿನ್ಯಾಸವು ನೆಲ ಮಹಡಿಯಲ್ಲಿ 1,000 ಆಸನಗಳ ಸುಸಜ್ಜಿತ ಸಭಾಂಗಣ, ಸಂಗೀತ ಗ್ಯಾಲರಿ ಒಳಗೊಳ್ಳಲಿದೆ. ಆದರೆ, ಮೇಲಿನ ಮಹಡಿಗಳು ಮಾಲ್‌ನಂತಹ ವಾಣಿಜ್ಯ ಸ್ಥಳಗಳನ್ನು ಹೊಂದುವ ನಿರೀಕ್ಷೆಯಿದೆ. ಇದನ್ನು 30 ವರ್ಷ ಗುತ್ತಿಗೆಗೆ ನೀಡಲಾಗುತ್ತದೆ. ಯೋಜನಾ ವೆಚ್ಚದ ಕನಿಷ್ಠ ಶೇ. 50ರಷ್ಟು ಹಣವನ್ನು ಸರ್ಕಾರವು ನೀಡುತ್ತದೆ. ಉಳಿದ ಹಣವನ್ನು ಗುತ್ತಿಗೆ ಆದಾಯ ನಿರೀಕ್ಷೆಯನ್ನು ಪಾಲಿಕೆ ಹೊಂದಿರುವುದಾಗಿ ಮಾಹಿತಿ ಇದೆ.