ಕಲಬುರಗಿ-ಬೆಂಗಳೂರು ವಂದೇ ಭಾರತ ರೈಲು

| Published : Mar 08 2024, 01:50 AM IST

ಸಾರಾಂಶ

ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಘೋಷಣೆಯಾಗಿದ್ದು ಇದೇ ಮಾ.12ರಿಂದ ಓಡಲಿದೆ. ಆ ದಿನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಘೋಷಣೆಯಾಗಿದ್ದು ಇದೇ ಮಾ.12ರಿಂದ ಓಡಲಿದೆ. ಆ ದಿನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಕಲ್ಬುರ್ಗಿ ಸಂಸದ ಡಾ.ಉಮೇಶ್ ಜಾಧವ್ ಮನವಿಗೆ ಕೇಂದ್ರ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿ, ವಂದೇ ಭಾರತ ರೈಲು ಈ ಭಾಗಕ್ಕೆ ನೀಡಿದೆ. ಕನ್ನಡಪ್ರಭ ಜೊತೆ ಮಾತನಾಡಿದ ಸಂಸದ ಡಾ.ಉಮೇಶ ಜಾಧವ್‌ ಅವರು, ಮಾ.12ರಂದು ಕಲಬುರಗಿ ರೈಲು ನಿಲ್ದಾಣದಿಂದ ವಂದೇ ಭಾರತ ರೈಲು ಉದ್ಘಾಟನೆಯಾಗಲಿದೆ ಎಂದು ಹೇಳಿದ್ದಾರೆ.

ಕಲ್ಬುರ್ಗಿ ಹಿರೇನಂದೂರ್ (ಬಿಪಿಸಿಎಲ್ ಡಿಪೋ) ನಲ್ಲಿ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗೆ ಒಪ್ಪಿಗೆ ದೊರಕಿದ್ದು ಇದಕ್ಕೂ ಪ್ರಧಾನಿ ಮೋದಿಯವರೇ ಚಾಲನೆ ನೀಡುತ್ತಿದ್ದಾರೆಂದೂ ಡಾ. ಜಾಧವ್‌ ಹೇಳಿದ್ದಾರೆ.

ಈಗಾಗಲೇ ಕಲಬುರಗಿ- ಬೆಂಗಳೂರು ನಡುವೆ ಮಾ.9ರಿಂದ ಎಕ್ಸಪ್ರೆಸ್‌ ರೈಲು ಸಂಚಾರದ ಘೋಷಣೆ ರೈಲ್ವೇ ಸಚಿವಾಲಯ ಮಾಡಿತ್ತು, ಈ ವಿಚಾರವಾಗಿ ಸಂಸದರೂ ಹೇಳಿಕೆ ನೀಡಿದ್ದರು.

ಆದರೀಗ ಏಕಾಏಕಿಯಾಗಿ ವಂದೇ ಭಾರತ ರೈಲು ಓಡಾಟಕ್ಕೆ ಹಸಿರು ನಿಶಾನೆ ದೊರಕುವ ಸಂದರ್ಭ ಎದುರಾಗಿರೋದರಿಂದ ಮಾ.9ರಿಂದ ಆರಂಭವಾಗಲಿರುವ ಕಲಬುರಗಿ-ಬಯ್ಯಪ್ಪನಹಳ್ಳಿ ರೈಲು ಸಂಚಾರದ ಸ್ಥಿತಿಗತಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರಕಿಲ್ಲ. ಮಾ.9ರಂದು ಕಲಬುರಗಿ- ಬಯ್ಯಪ್ಪನಹಳ್ಳಿ, ಮಾ.12ರಂದು ವಂದೇ ಭಾರತ ರೈಲು ಸಂಚಾರ ಎರಡೆರಡು ರೈಲುಗಳು ಕಲಬುರಗಿಯಿಂದ ಓಡೋದು ಸಾಧ್ಯವೆ? ಕಲಬುರಗಿ-ಬಯ್ಯಪ್ಪನಹಳ್ಳಿ ರೈಲು ಸಂಚಾರ ಸದ್ಯಕ್ಕೆ ಇರೋದಿಲ್ಲವೆ? ಎಂಬ ಪ್ರಶ್ನೆಗಳು ಪ್ರಯಾಣಿಕರಲ್ಲಿ ಉದ್ಭವವಾಗಿವೆ.