ಸಾರಾಂಶ
ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿಯವರ ಸ್ವಾಗತಕ್ಕೆ ಬರದೇ ಅಗೌರವ ತೋರಿಸಿದ್ದಾರೆಂದು ಸಂಸದ ಡಾ. ಉಮೇಶ ಜಾಧವ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿಯವರ ಸ್ವಾಗತಕ್ಕೆ ಬರದೇ ಅಗೌರವ ತೋರಿಸಿದ್ದಾರೆಂದು ಸಂಸದ ಡಾ. ಉಮೇಶ ಜಾಧವ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ಖಂಡಿಸಿದ್ದಾರೆ.ಪ್ರಧಾನಿ ಮೋದಿಯವರು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೊಗುವ ಸಂದರ್ಭದಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಲ್ಲಿಂದ ಹೆಲಿಕಾಫ್ಟರ್ ಮೂಲಕ ತೆರಳಿರುತ್ತಾರೆ. ಈ ದಿವಸ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರು ಕಾರಣಾಂತರದಿಂದ ಗೈರು ಇದ್ದುದರಿಂದ ಮುಖ್ಯಮಂತ್ರಿಯವರು ಜಿಲ್ಲೆಯವರೇ ಆದ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಇವರಿಗೆ ಪ್ರಧಾನಿಯವರನ್ನು ಬರಮಾಡಿಕೊಳ್ಳಲು ಸೂಚಿಸಿರುತ್ತಾರೆ. ಇದನ್ನರಿಯದೆ ಸಂಸದ ಡಾ. ಉಮೇಶ ಜಾಧವ ಇವರು ಕಲಬುರಗಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡದೇ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಸಂಬಂದವಿಲ್ಲದ ವಿಷಯಗಳನ್ನು ಮಾತನಾಡುತ್ತಲಿದ್ದಾರೆಂದು ಟೀಕಿಸಿದ್ದಾರೆ.
ಡಾ. ಖರ್ಗೆಯವರು ಕೇಂದ್ರದಿಂದ ಮಂಜೂರು ಮಾಡಿಸಿದಂತಹ ಅನೇಕ ಪ್ರಗತಿ ಯೋಜನೆಗಳು ಕೈಬಿಟ್ಟು ಹೋಗುತ್ತಿರೋದರ ಬಗ್ಗೆ ಮಾತನಾಡದ ಸಂಸದರ ನಡೆನುಡಿ ಜನ ಗಮನಿಸುತ್ತಿದ್ದಾರೆ. ಪ್ರಗತಿ ಯೋಜನೆ ಪುನಃ ಕಲಬುರಗಿಗೆ ತರೋದರ ಬಗ್ಗೆ ಯೋಚಿಸದೆ ಕೆಲಸವಿಲ್ಲದ ಸಂಗತಿಗಳನ್ನೇ ಎತ್ತಿ ಹೇಳಿಕೆ ಕೊಡುತ್ತಿದ್ದಾರೆ. ಜನರೇ ಇವರಿಗೆ ಪಾಠ ಕಲಿಸುತ್ತಾರೆಂದು ಜಗದೇವ ಗುತ್ತೇದಾರ್ ಹೇಳಿದ್ದಾರೆ.