ಸಾರಾಂಶ
ಪ್ರಸಿದ್ಧ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಜ.8ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದೀಗ ವೈರಲ್ ಆಗಿದೆ.
ಅಫಜಲ್ಪುರ : ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಉಡಚಾಣ ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಜ.8ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದೀಗ ವೈರಲ್ ಆಗಿದೆ.
ಅಂದು ಕಂಠ ಪೂರ್ತಿ ಕುಡಿದಿದ್ದ ಶ್ರೀಗಳು, ತಮ್ಮ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಅಪಘಾತ ನಡೆಸಿದ್ದಲ್ಲದೆ, ಅರ್ಧಂಬರ್ಧ ಬಟ್ಟೆ ಬಿಚ್ಚಿಕೊಂಡು ಅಲೆದಾಡುತ್ತಿದ್ದರು. ಸ್ಥಳೀಯರು ಪರಿಚಯ ಕೇಳಿದಾಗ ಸುಳ್ಳು ಮಾಹಿತಿ ನೀಡಿ ಪರಾರಿಯಾಗಲು ಯತ್ನಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡು ಗ್ರಾಮದಲ್ಲಿಯೇ ಹಿಡಿದಿಟ್ಟುಕೊಂಡಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಉಡಚಾಣ ಗ್ರಾಮಸ್ಥರು ಸ್ಥಳಕ್ಕೆ ಹೋಗಿ, ಸ್ಥಳೀಯರ ಮನವೊಲಿಸಿ, 22 ಸಾವಿರ ರು. ದಂಡ ಕಟ್ಟಿ ಅವರನ್ನು ಬಿಡಿಸಿಕೊಂಡು ಬಂದಿದ್ದರು.
ಶ್ರೀಗಳ ನಡವಳಿಕೆಗೆ ಬೇಸತ್ತ ಗ್ರಾಮಸ್ಥರು ಮಠಕ್ಕೆ ಹೊಸ ಮಠಾಧಿಪತಿ ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಸೋಮವಾರ ಸಭೆ ನಡೆಸಿದರು. ಬುಧವಾರ ಶಾಸಕ ಎಂ.ವೈ.ಪಾಟೀಲರನ್ನು ಭೇಟಿಯಾಗಿ ಉಜ್ಜಯಿನಿ ಜಗದ್ಗುರುಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿಕ ಮಾಡುವಂತೆ ಮನವಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.
ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಶ್ರೀಗಳು ತಮ್ಮ ಹೆಸರಲ್ಲಿ ಲೈಸೆನ್ಸ್ ಪಡೆದು ಪಿಸ್ತೂಲ್ ಪಡೆದಿದ್ದರೂ ಅದೀಗ ಪೊಲೀಸರ ವಶದಲ್ಲಿದೆ. ಅಲ್ಲದೆ, ಭಕ್ತರ ಹಣದಲ್ಲಿ ಅವರು ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆಯನ್ನು ಪ್ರವೀಣ್ ಹಾಲಳ್ಳಿ ಎಂಬುವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ವಾಮೀಜಿ, ತಾವು ಚಲಾಯಿಸುತ್ತಿದ್ದ ಕಾರನ್ನು ಮಠದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.