ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಸಂತೋಷ್ ಎಂಬಾತನ ಕಾಲಿಗೆ ಬುಧವಾರ ನಸುಕಿನಲ್ಲಿ ಕಲಬುರಗಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
- ಕಲಬುರಗಿಯ ಸೆಂಟ್ರಲ್ ಜೈಲಿಂದ ಮಂಗಳವಾರ ಬೆಳಗ್ಗೆ ಸಂತೋಷ್ ಸೇರಿ ಮೂರು ಕೈದಿಗಳ ಪರಾರಿ
- ಮಂಗಳವಾರ ರಾತ್ರಿಯೇ ಹುಮನಾಬಾದ್ ಪೊಲೀಸರಿಂದ ಬಸ್‌ನಲ್ಲಿ ಸಂಚರಿಸುತ್ತಿದ್ದ ಸಂತೋಷ್ ಸೆರೆ- ಬಂಧನ ಬಳಿಕ ಆತನನ್ನು ಕಲಬುರಗಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾಗಿ ಹೇಳಿದ್ದ ಬೀದರ್ ಪೊಲೀಸರು
- ಬುಧವಾರ ಬೆಳಗ್ಗೆ ಕಾಲಿಗೆ ಗುಂಡು ಹೊಡೆದು ಸಂತೋಷ್ ಬಂಧನ ಎಂದು ಕಲಬುರಗಿ ಪೊಲೀಸರ ಹೇಳಿಕೆ- ಒಬ್ಬನೇ ವ್ಯಕ್ತಿಯನ್ನು ಬಂಧಿಸಿದ್ದಾಗಿ ಎರಡು ಜಿಲ್ಲೆ ಪೊಲೀಸರ ಹೇಳಿಕೆಯಿಂದಾಗಿ ಭಾರೀ ಗೊಂದಲ ಸೃಷ್ಟಿ
ಕನ್ನಡಪ್ರಭ ವಾರ್ತೆ ಕಲಬುರಗಿ:ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಸಂತೋಷ್ ಎಂಬಾತನ ಕಾಲಿಗೆ ಬುಧವಾರ ನಸುಕಿನಲ್ಲಿ ಕಲಬುರಗಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಆತನ ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಬೀದರ್ ಜಿಲ್ಲೆ ಹುಮನಾಬಾದ್‌ನ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ರಾತ್ರಿಯೇ ಬಸ್ಸಿನಲ್ಲಿ ಕ್ಯಾಪ್ ಹಾಕಿಕೊಂಡು ಕುಳಿತಿದ್ದ ಈ ಆರೋಪಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು ವರದಿಯಾಗಿತ್ತು. ಹೀಗಾಗಿ, ಹುಮನಾಬಾದ್ ಪೊಲೀಸರು ಬಂಧಿಸಿದ್ದ ಆರೋಪಿಯನ್ನೇ ಮರುದಿನ ಬೆಳಗ್ಗೆ ಕಲಬುರಗಿ ಪೊಲೀಸರು ಎನ್‌ಕೌಂಟರ್ ಮೂಲಕ ಬಂಧಿಸಿರುವುದಾಗಿ ಹೇಳಿಕೊಂಡಿದ್ದು, ಗೊಂದಲಕ್ಕೆ ಕಾರಣವಾಗಿದೆ. ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ನಕಲಿ ‘ಬಂಧನ’ ಆರೋಪಕ್ಕೆ ಗ್ರಾಸ ಒದಗಿಸಿದೆ.
ಪ್ರಕರಣವೇನು?:ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಇಲ್ಲಿನ ಸೆಂಟ್ರಲ್ ಜೈಲಿನಲ್ಲಿದ್ದ ಮೂವರು ಕೈದಿಗಳು ಮಂಗಳವಾರ ನಸುಕಿನ ಜಾವ ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು.
ಕೈದಿಗಳನ್ನು ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ್ ಬಸಪ್ಪ ಹಾಗೂ ಬೀದರ್ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯ ಎಂದು ಗುರುತಿಸಲಾಗಿತ್ತು.ಈ ಮಧ್ಯೆ, ಮಂಗಳವಾರ ರಾತ್ರಿ ಹುಮನಾಬಾದ್ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ಕೈಗೊಂಡಿದ್ದ ವೇಳೆ ಸಂತೋಷ್‌ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈತ ಬೀದರ್ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಕ್ಯಾಪ್ ಹಾಕಿಕೊಂಡು ಕುಳಿತಿದ್ದ. ಆದರೆ, ಇದೇ ವ್ಯಕ್ತಿಯನ್ನು ಬುಧವಾರ ನಸುಕಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಿದ್ದಾಗಿ ಕಲಬುರಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ಈತನ ಬಂಧನ ಪ್ರಕರಣ ಗೊಂದಲಕ್ಕೆ ಕಾರಣವಾಗಿದೆ.
ಕಲಬುರಗಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಪರಾರಿಯಾಗಿದ್ದ ಮೂವರು ಆರೋಪಿಗಳ ಪತ್ತೆಗಾಗಿ ಕಲಬುರಗಿ ಹಾಗೂ ಬೀದರ್ ಪೊಲೀಸರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ಮಧ್ಯೆ, ಸಂತೋಷ್ ಎಂಬ ಕೈದಿ ಕಪನೂರ್ ಇಂಡಸ್ಡ್ರಿಯಲ್ ಏರಿಯಾದಲ್ಲಿ ಇರುವ ಖಚಿತ ಮಾಹಿತಿ ಸಿಕ್ಕಿದ್ದು, ಆತನನ್ನು ಬಂಧಿಸಲು ಹೋದಾಗ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಜೊತೆಗೆ ಆರೋಪಿಯ ಬಲಗಾಲಿಗೂ ಗುಂಡು ಹೊಡೆದಿದ್ದಾರೆ. ಪರಾರಿಯಾದ ಇನ್ನಿಬ್ಬರು ಕೈದಿಗಳಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದರು.ಹುಮನಾಬಾದ್‌ನಲ್ಲಿ ಸಂತೋಷ್‌ನ ಬಂಧನದ ವರದಿ ಬಗ್ಗೆ ಆಯುಕ್ತರ ಗಮನ ಸೆಳೆದಾಗ, ನಿನ್ನೆ ಆ ಎಲ್ಲಾ ಸಂಗತಿಗಳು ತುಂಬಾ ಗೊಂದಲದಲ್ಲಿದ್ದವು. ಬುಧವಾರ ಬೆಳಗಿನ ಜಾವ ನಾವು ಬಂಧನಕ್ಕೆ ತೆರಳಿದಾಗ ಆತ ಹಲ್ಲೆ ಮಾಡಿ ಪರಾರಿಗೆ ಮುಂದಾದ. ಆಗ ನಮ್ಮ ಅಧಿಕಾರಿಗಳು ಆತ್ಮರಕ್ಷಣೆಗೋಸ್ಕರ ಗುಂಡು ಹಾರಿಸಿದ್ದಾರೆಂದು ಸ್ಪಷ್ಟಪಡಿಸಿದರು.
8 ಸಿಬ್ಬಂದಿ ಅಮಾನತ್ತು:ಈ ಮಧ್ಯೆ, ಕೈದಿಗಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಕೇಂದ್ರ ಕಾರಾಗೃಹದ 8 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯಲೋಪದ ಆರೋಪದಡಿ ಮೂವರು ವಾರ್ಡರ್‌ಗಳು, ಇಬ್ಬರು ಮುಖ್ಯ ವಾರ್ಡರ್‌ಗಳು, ಒಬ್ಬ ಸಹಾಯಕ ಅಧೀಕ್ಷಕ, ಒಬ್ಬ ಅಧೀಕ್ಷಕ ಹಾಗೂ ಒಬ್ಬ ಕಾರ್ಯನಿರ್ವಾಹಕ ಜೈಲರ್ ಗಳು ಅಮಾನತುಗೊಂಡಿದ್ದಾರೆ.