ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬೆಂಗಳೂರಿನಿಂದ ಕಲಬುರಗಿವರೆಗೆ ಓಡುವ ವಂದೆ ಭಾರತ್ ರೈಲು ಬೀದರ್‌ವರೆಗೆ ವಿಸ್ತರಿಸಲು ಇರುವ ಸಾಧ್ಯತೆಗಳು ಮತ್ತು ಈ ಕುರಿತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಸಂಸದ ಸಾಗರ ಖಂಡ್ರೆ ತಿಳಿಸಿದರು.ನಗರದ ಜಿ.ಪಂ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ, ಜಿಲ್ಲಾ ದಿಶಾ ಸಮಿತಿಯ ಪ್ರಥಮ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈಲ್ವೆ ವಿಷಯಗಳ ಕುರಿತು ಚರ್ಚೆ ನಡೆಸಲು ಅ.24ರಂದು ಜನರಲ್ ಮ್ಯಾನೇಜರ್ ಅವರೊಂದಿಗೆ ಸಭೆ ನಿಗದಿಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಜೂನ್ 2025ರೊಳಗಾಗಿ ರೈಲ್ವೆ ನಿಲ್ದಾಣ ಕಾಮಗಾರಿ ಪೂರ್ಣ:
ನಗರದದಲ್ಲಿ 25 ಕೋಟಿ ರು. ವೆಚ್ಚದಲ್ಲಿ ಅಮೃತ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣ ಕಾಮಗಾರಿ ಮುಂಬರುವ ಜೂನ್ ಅಂತ್ಯದೊಳಗೆ ಮುಗಿಯಲಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿ ಶಶಾಂಕ್ ತಿಳಿಸಿದರು.ರೈಲ್ವೆ ನಿಲ್ದಾಣದ ಗಾಂಧಿ ಗಂಜ್ ಕಡೆಯಲ್ಲಿ ಇನ್ನೂ ಪ್ಲಾಟ್‌ಫಾರಂ ನಿರ್ಮಾಣ ಮಾಡಬೇಕಾಗಿದೆ. ಅಲ್ಲದೇ ರೈಲ್ವೆಯ ಸರ್ವೆ ನಂಬರ್ 31ರಲ್ಲಿ ಕೆಲವರು ಜಮೀನು ಕಬಳಿಕೆ ಮಾಡಿದ್ದಾರೆಂದು ಮಾಹಿತಿ ನೀಡಿದರಲ್ಲದೇ ಪ್ರತಿ ದಿನ ರೈಲು ನಿಲ್ದಾಣಕ್ಕೆ 60 ಸಾವಿರ ಲೀಟರ್ ನೀರು ಕೊಡಲಾಗುತ್ತದೆ. ಇದನ್ನು 1 ಲಕ್ಷ ಲೀಟರ್ ವರೆಗೆ ಹೆಚ್ಚಳ ಮಾಡಬೇಕೆಂದು ಅಧಿಕಾರಿಗಳು ಕೋರಿದರು.
ಸಭೆಗೆ ಗೈರಾದವರಿಗೆ ನೋಟಿಸ್ ನೀಡಿ:ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅವರಿಗೆ ಸಮಯಕ್ಕೆ ಪರಿಹಾರ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲು ಅಧಿಕಾರಿಗಳು ಗಮನಹರಿಸಬೇಕೆಂದು ಮತ್ತು ಅಧಿಕಾರಿಗಳು ಅಪೂರ್ಣ ಮಾಹಿತಿ ನೀಡುವದು ಬೇಡ. ಮುಂದಿನ ಸಭೆಗೆ ಪೂರ್ಣ ಮಾಹಿತಿ ತನ್ನಿ. ಸಭೆಗೆ ಯಾವ ಅಧಿಕಾರಿ ಬಂದಿಲ್ಲ ಅವರಿಗೆ ಕಾರಣ ಕೇಳಿ ನೊಟೀಸ್ ನೀಡಿ ಎಂದರು.
ರೈತರ ಆತ್ಮ ಹತ್ಯೆ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ರೈತರಿಗೆ ನೂತನ ಕೃಷಿ ಹಾಗೂ ಹಸಿ ಬೀಜಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಬೇಕು ಎಂದು ಅಧಿಕಾರಿಗಳಿಗೆ ಸಾಗರ ಖಂಡ್ರೆ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿತೊ ಡಾ.ಗಿರೀಶ ಬದೋಲೆ, ಎಸ್ಪಿ ಪ್ರದೀಪ ಗುಂಟಿ, ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಎಂಎಲ್ಸಿ ಮಾರುತಿರಾವ್ ಮೂಳೆ ಇದ್ದರು.
ರಸ್ತೆ ಕಾಮಗಾರಿ ಕಳಪೆ, ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ:ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯ ಸರ್ಕಾರದಿಂದ ಭಾಲ್ಕಿ ನಿಲಂಗಾ, ನೌಬಾದ್-ಕಮಲನಗರ, ನೌಬಾದ್-ಹುಮನಾಬಾದ್, ರಸ್ತೆಗಳು ರಾಜ್ಯ ಸರ್ಕಾರದಿಂದ ಮೇಲ್ದರ್ಜೆಗೇರಿಸಿದ್ದು, ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಕೂಡಲೇ ಗುಣಮಟ್ಟ ಪರೀಕ್ಷೆ ಮಾಡಿ ತಪ್ಪಿಸ್ಥರ ವಿರದ್ದ ಕ್ರಮ ಕೈಗೊಂಡು ವರದಿ ನೀಡುವಂತೆ (ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ ಗ್ರಾಮದಲ್ಲಿ ಒಂದು ಸರ್ಕಾರಿ ಗೋಶಾಲೆ ಇದ್ದು, 9 ಖಾಸಗಿ ಗೋಶಾಲೆಗಳಿವೆ. ಅದರಲ್ಲಿ ಜಾನುವಾರು ಸಂಖ್ಯೆಯು ಕಡಿಮೆಯಾಗಿದೆ. ಆದರೆ ರಸ್ತೆಗಳ ಮೇಲೆ ಬಿಡಾಡಿ ದನಗಳು ಓಡಾಡುತ್ತಿರುವುದರಿಂದ ರಸ್ತೆ ಅಪಘಾತಗಳು ಆಗುತ್ತಿವೆ. ಕೂಡಲೇ ಸ್ಥಳೀಯ ಸಂಸ್ಥೆಗಳು, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಸೇರಿಕೊಂಡು ಅವುಗಳನ್ನು ಗೋಶಾಲೆಗಳಿಗೆ ಬಿಡುವಂತೆ ಕ್ರಮ ವಹಿಸಬೇಕು ಎಂದು ಸಚಿವರು ಹೇಳಿದರು.