ಕಲಬುರಗಿ: ಸಚಿವ ಪ್ರಿಯಾಂಕ್‌ ಖರ್ಗೆ ಶಿಷ್ಟಾಚಾರ ಉಲ್ಲಂಘನೆ?

| Published : Jan 21 2024, 01:32 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಶುಕ್ರವಾರ ಗೈರಾಗುವ ಮೂಲಕ ಪ್ರಿಯಾಂಕ್‌ ಖರ್ಗೆ ಶಿಷ್ಟಾಚಾರ ಉಲ್ಲಂಘನೆ ಮಾಡಿದರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಮೋದಿ ಸೋಲಾಪೂರಕ್ಕೆ ಹೋಗುವ ನಿಮಿತ್ತ ಕಲಬುರಗಿ ದಾರಿಯನ್ನು ಆಯ್ಕೆ ಮಾಡಿಕೊಂಡದ್ದೇಕೆಂದು ಕಳೆದ 3 ದಿನದಿಂದ ರಾಜಕೀಯ ಪಡಸಾಲೆಯಲ್ಲಿ ವಿವಿಧ ರೀತಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಪ್ರಿಯಾಂಕ್‌ ಗೈರು ರಾಜಕೀಯ ಚರ್ಚೆಯ ಮಗ್ಗಲು ಬದಲಾಯಿಸಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಗೆ ಶುಕ್ರವಾರದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದೆ ದೂರ ಉಳಿದಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರ ನಡೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದಾರೆ.

ಮೋದಿ ಸ್ವಾಗತಕ್ಕೆ ಗೈರಾಗುವ ಮೂಲಕ ಪ್ರಿಯಾಂಕ್‌ ಖರ್ಗೆ ಶಿಷ್ಟಾಚಾರ ಉಲ್ಲಂಘನೆ ಮಾಡಿದರೆ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಮೋದಿ ಸೋಲಾಪೂರಕ್ಕೆ ಹೋಗುವ ನಿಮಿತ್ತ ಕಲಬುರಗಿ ದಾರಿಯನ್ನು ಆಯ್ಕೆ ಮಾಡಿಕೊಂಡದ್ದೇಕೆಂದು ಕಳೆದ 2 ದಿನದಿಂದ ರಾಜಕೀಯ ಪಡಸಾಲೆಯಲ್ಲಿ ನಾನಾ ರೀತಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಪ್ರಿಯಾಂಕ್‌ ಗೈರು ರಾಜಕೀಯ ಚರ್ಚೆಯ ಮಗ್ಗಲು ಬದಲಾಯಿಸಿದೆ. ಪ್ರಿಯಾಂಕ್‌ ಸಾರಾ ಸಾಗಾಟಾಗಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಮೋದಿ ಅವರು ಕಲಬುರಗಿಗೆ ಬಂದಿಳಿದು ಕೆಲಕಾಲ ತಂಗಿ ಸೋಲಾಪೂರಕ್ಕೆ ಹೋಗಿ ಬಂದು ಕಲಬುರಗಿಯಿಂದಲೇ ಬೆಂಗಳೂರಿಗೆ ವಿಮಾನದಲ್ಲಿ ತೆರಳಿದರು. ಪ್ರಿಯಾಂಕ್‌ ಖರ್ಗೆ ಅನುಪಸ್ಥಿತಿ ಹಿನ್ನೆಲೆ ಜಿಲ್ಲೆಯವರೇ ಆದ ಸಚಿವ ಡಾ. ಶರಣಪ್ರಕಾಶ ಪಾಟೀಲರು ಬೆಂಗಳೂರಿನಿಂದ ರೈಲಿನ ಮೂಲಕ ಕಲಬುರಗಿಗೆ ಬಂದು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು ಪ್ರಧಾನಿ ಮೋದಿಗೆ ರಾಜ್ಯ ಸರ್ಕಾರದ ಪರವಾಗಿ ಸ್ವಾಗತಿಸಿದರು.

ಕನ್ನಡಪ್ರಭ ಜಿಲ್ಲಾಡಳಿತದ ಶಿಷ್ಟಾಚಾರ ವಿಭಾಗಕ್ಕೆ ಈ ಕುರಿತಂತೆ ಮಾಹಿತಿ ಕೋರಿದಾಗ, ಪ್ರಧಾನಿ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಆದರೆ ಇಲ್ಲಿ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ನಮ್ಮವರೇ ಆದ ಸಚಿವ ಡಾ. ಶರಣಪ್ರಕಾಶ ಪಾಟೀಲರು ರಾಜ್ಯದ ಪರವಾಗಿ ಪ್ರಧಾನಿಗೆ ಗೌರವ ಸಲ್ಲಿಸಿ ಸ್ವಾಗತಿಸಿದ್ದಾರೆ. ಡಾ. ಶರಣಪ್ರಕಾಶರನ್ನು ರಾಜ್ಯ ಸರ್ಕಾರದ ಪ್ರತಿನಿಧಿ ಎಂದು ಪ್ರಧಾನಿ ಸ್ವಾಗತಕ್ಕೆ ನಿಯೋಜಿಸಿರುವ ಯಾವುದೇ ರೀತಿ ಲಿಖಿತ ರಾಜ್ಯ ಸರ್ಕಾರದ ಸೂಚನೆಗಳಾಗಲಿ, ಆದೇಶಗಳಾಗಲಿ ತಮಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಂಕ್‌ ಈ ಕಾರಣಗಳಿಂದ ದೂರ ಉಳಿದರೆ?:

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಎಐಸಿಸಿ ಅಧ್ಯಕ್ಷ, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆ ಪುತ್ರ, ಜೊತೆಗೆ ಮೋದಿಯವರನ್ನು ಕಟುವಾಗಿ ಟೀಕಿಸುವವರಲ್ಲಿ ಮೊದಲಿಗರು, ಸ್ವಾಗತಿಸೋವಾಗ ಏನಾದರೂ ಮುಜುಗರದ ಸನ್ನಿವೇಶಗಳು ಘಟಿಸಿದರೆ ಹೇಗೆಂದು ಸಂಪುಟ ಸಹೋದ್ಯೋಗಿ ಡಾ. ಶರಣಪ್ರಕಾಶರಿಗೆ ಈ ಕೆಲಸ ಬಿಟ್ಟುಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಪ್ರಧಾನಿ ಸ್ವಾಗತಕ್ಕೆ ಬಾರದೆ ದೂರ ಉಳಿದಿರುವ ಪ್ರಿಯಾಂಕ್‌ ಧೋರಣೆ ಟೀಕೆಗೆ ಗುರಿಯಾಗಿದೆ. ಪ್ರಿಯಾಂಕ್‌ ತಪ್ಪು ಮಾಡಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ತಕ್ಷಣ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನ ಖಾಲಿ ಮಾಡಬೇಕು ಎಂದು ಸಂಸದ ಉಮೇಶ್‌ ಜಾಧವ್‌ ಆಗ್ರಹಿಸಿದ್ದಾರೆ.