ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ ಮುಂದೂಡಿಕೆ

| Published : Jan 17 2024, 01:45 AM IST

ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಯದೇವ ಹೃದ್ರೋಗದ ಕಾಮಗಾರಿ ಇನ್ನೂ ಹಲವು ಬಾಕಿ ಇರೋದರಿಂದ ಜನವರಿಯಲ್ಲೇ ಉದ್ಘಾಟನೆ ಅಸಾಧ್ಯವೆಂಬುದು ಮನಗಂಡು ಉದ್ಘಾಟನೆಯನ್ನು ಮಾರ್ಚ್‌ಗೆ ಮುಂದೂಡಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಮುಖ್ಯ ರಸ್ತೆಯಲ್ಲಿ ತಲೆ ಎತ್ತುತ್ತಿರುವ ಬಹುಕೋಟಿ ಮೊತ್ತದ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆ ಕಟ್ಟಡ ಕಾಮಗಾರಿ ವಿಲಂಬವಾಗಿದ್ದರಿಂದ ಮಾಸಾಂತ್ಯದ ಕೊನೆಯಲ್ಲಿ ನಡೆಯಬೇಕಿದ್ದ ಆಸ್ಪತ್ರೆ ಉದ್ಘಾಟನೆ ಮುಂದೂಡಲ್ಪಟ್ಟಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರು, ಆಸ್ಪತ್ರೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ಕೈಗೊಂಡರಲ್ಲದೆ ಕಾಮಗಾರಿ ಇನ್ನೂ ಹಲವು ಬಾಕಿ ಇರೋದರಿಂದ ಜನೇವರಿಯಲ್ಲೇ ಉದ್ಘಾಟನೆ ಅಸಾಧ್ಯವೆಂಬುದು ಮನಗಂಡು ಉದ್ಘಾಟನೆಯನ್ನು ಮಾರ್ಚ್‌ಗೆ ಮುಂದೂಡಿದ್ದಾಗಿ ಘೋಷಿಸಿದ್ದಾರೆ.

ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಶಾಖೆ ಆರಂಭವಾಗಿ ದಶಕ ಕಳೆದಿದ್ದು ಇದೀಗ ಕೆಕೆಆರ್‌ಡಿಬಿ ಅನುದಾನದಲ್ಲಿ ಸ್ವತಂತ್ರ ಕಟ್ಟಡ ಅದಕ್ಕಾಗಿಯೇ ನಿರ್ಮಾಣವಾಗುತ್ತಿದೆ. 112 ಕೋಟಿ ರು. ಕಟ್ಟಡ ಕಾಮಗಾರಿ 40 ಕೋಟಿ ರು. ಯಂತ್ರೋಪಕರಣಕ್ಕೆ ಕೆಕೆಆರ್‌ಡಿಬಿಯೇ ಹಣ ನೀಡುತ್ತಿದೆ. ಇದಲ್ಲದೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಯಂತ್ರೋಪಕರಣಕ್ಕೆಂದು 14 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.

ಸದ್ಯಕ್ಕೆ ಜಿಮ್ಸ್‌ ಜಿಲ್ಲಾಸ್ಪತ್ರೆಯಲ್ಲೇ ಜಯದೇವ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರೋದರಿಂದ ಅಲ್ಲಿ ರೋಗಿಗಳಿಗೆ ತುಂಬ ತೊಂದರೆ ಕಾಡುತ್ತಿದೆ. ಇಕ್ಕಟ್ಟಾಗಿರುವ ಪರಿಸರದಲ್ಲಿ ಆಸ್ಪತ್ರೆ ಕಾರ್ಯನಿರ್ವಹಣೆ ಸರಿಯಾಗಿ ಸಾಗುತ್ತಿಲ್ಲ, ಹೀಗಾಗಿ ಇಲ್ಲೀಗ ಹೊಸ ಕಟ್ಟಡ ನಿರ್ಮಾಣ ಸಾಗಿದ್ದು ಆಸ್ಪತ್ರೆ ಆದಷ್ಟು ಬೇಗ ಇಲ್ಲಿಗೆ ಸ್ಥಳಾಂತರಿಸೋದು ಅಗತ್ಯವಾಗಿದೆ. ಆಸ್ಪತ್ರೆ ಉದ್ಘಾಟನೆ ಮುಂದೆ ಹೋದರೆ ಪರವಾಗಿಲ್ಲ, ಆಸ್ಪತ್ರೆಯನ್ನು ಇಲ್ಲಿಗೆ ಸ್ಥಳಾಂತರಿಸಿ ಮುಂದಿನ ಕೆಲಸಗಳನ್ನು ಮಾಡುತ್ತೇವೆ. ಸುಸಸಜ್ಜಿತ ಆಸ್ಪತ್ರೆ ಜನತೆಗೆ ನೀಡುವುದೇ ತಮ್ಮ ಗುರಿ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಹೊಸ ಜಯದೇವ ಕಟ್ಟಡ ಕಲಬುರಗಿ ಜನತೆಗೆ ವರದಾನವಾಗಲಿದೆ. ಇಲ್ಲಿ 3 ಕ್ಯಾಥ್‌ಲ್ಯಾಬ್‌, 3 ಆಪರೇಷನ್‌ ಥೇಟರ್‌ ನಿರ್ಮಿಸಲಾಗುತ್ತಿದೆ. ಇದಲ್ಲದೆ ಅತ್ಯಾಧುನಿಕ ಸವಲತ್ತುಗಳನ್ನು ಇಲ್ಲಿ ಮಾಡಲಗುತ್ತಿದೆ. ಈಗಾಗಲೇ ಜಯದೇವದಲ್ಲಿ ನಿತ್ಯ ಹೊರರೋಗಿಗಳ ಸಂಖ್ಯೆ 400 ತಲುಪಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ. ಮುಂದಿನ ಬೇಡಿಕೆಗಳನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದರು.

ಕಲಬುರಗಿಯಲ್ಲಿರುವ ಜಿಮ್ಸ್‌ ಜಿಲ್ಲಾಸ್ಪತ್ರೆಯಲ್ಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕ್ರಿಟಿಕಲ್‌ ಕೇರ್‌ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೆ ಇಲ್ಲಿರುವ ಮಕ್ಕಳ ವಾರ್ಡ್‌ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕಲಬುರಗಿಯಲ್ಲಿರುವ ಆಸ್ಪತ್ರೆಯಲ್ಲಿ 10 ಕೋಟಿ ರು. ವೆಚ್ಚದ ಸುಟ್ಟಗಾಯಗಳಿಗೆ ಚಿಕಿತ್ಸಾ ವಾರ್ಡ್‌, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಯೋಜನೆಗಳು ಕ್ಯಾಬಿನೆಟ್‌ಗೆ ಬರಲಿವೆ. ಶೀಘ್ರ ಇವೆಲ್ಲವೂ ಅನುಮೋದನೆಗೊಂಡು ಕಾಮಗಾರಿ ಆರಂಭವಾಗಲಿವೆ ಎಂದರು.