ಸಾರಾಂಶ
ಗದಗ: ನಾಡಿನ ಪ್ರಖ್ಯಾತ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಪರಿಶ್ರಮಿಗಳು ಹಾಗೂ ಪ್ರತಿಭಾನ್ವಿತರಾಗಿದ್ದರು. ಕನ್ನಡ ನಾಡಿನಲ್ಲಿ ಅನೇಕ ಸಾಹಿತಿ, ವಿದ್ಯಾರ್ಥಿಗಳನ್ನು ಸಂಶೋಧಕರನ್ನಾಗಿ ರೂಪಿಸುವಲ್ಲಿ ಕಲಬುರ್ಗಿಯವರ ಪಾತ್ರ ಬಹಳ ಮಹತ್ವದ್ದಾಗಿದೆ. ಕನ್ನಡ, ಲಿಂಗಾಯತ ಧರ್ಮ, ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2713ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಡಾ.ಎಂ.ಎಂ. ಕಲಬುರ್ಗಿ ತಮ್ಮ ಬದುಕಿನುದ್ದಕ್ಕೂ ಸಂಶೋಧನೆ, ಕನ್ನಡ ಹಾಗೂ ಬಸವಣ್ಣನವರನ್ನು ಉಸಿರಾಗಿಸಿಕೊಂಡಿದ್ದರು ಎಂದರು.ಗದಗ ಮತ್ತು ನಾಗನೂರು ಮಠದ ಪ್ರಕಾಶನ ಸಂಸ್ಥೆಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಧರ್ಮ ಲಿಂಗಾಯತ ಧರ್ಮ. ಡಾ.ಫ.ಗು. ಹಳಕಟ್ಟಿ, ಆರ್.ಸಿ. ಹಿರೇಮಠ ಹಾಗೂ ಎಂ.ಎಂ. ಕಲಬುರ್ಗಿ ಸಂಶೋಧನಾ ಪೂರ್ವಕವಾಗಿ ವಚನ ಸಾಹಿತ್ಯ ಸಂಗ್ರಹಿಸಿ, ಸಂಶೋಧಿಸಿ, ಶರಣ ಸಾಹಿತ್ಯ ಉಳಿಸಿ ಬೆಳೆಸಿದ್ದಾರೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವಪ್ಪ ಕುರಿ ಮಾತನಾಡಿ, ದಕ್ಷಿಣದಲ್ಲಿ ಚಿದಾನಂದ ಮೂರ್ತಿಯವರಿದ್ದಂತೆ ಉತ್ತರ ಕರ್ನಾಟಕದಲ್ಲಿ ಎಂ.ಎಂ. ಕಲಬುರ್ಗಿ ಇದ್ದರು. ಪ್ರತಿಯೊಂದನ್ನು ಸಂಶೋಧನೆಗೆ ಒಳಪಡಿಸಿ ಜನರಿಗೆ ತಿಳಿಸುವ ಕೆಲಸ ಮಾಡಿದರು. ಲಿಂಗಾಯತ, ವಚನಸಾಹಿತ್ಯ, ಬಸವಣ್ಣನವರ ಕುರಿತು ವಿಶೇಷ ಸಂಶೋಧನೆ ಅವರದಾಗಿತ್ತು. ವಿಶ್ವವಿದ್ಯಾಲಯದಲ್ಲಿ ಅವರು ಪಂಪಭಾರತ ಪಾಠ ಮಾಡುವುದನ್ನು ನೆನಪಿಸಿಕೊಂಡರು. ಅವರ ಸಂಶೋಧನೆಯ ಪ್ರವೃತ್ತಿ ಕಾವ್ಯಕ್ಕಿಂತಲೂ ಹೆಚ್ಚಿತ್ತು. ಅವರ ಮುಖ್ಯ ಕ್ಷೇತ್ರವೇ ಸಂಶೋಧನೆಯಾಗಿತ್ತು ಎಂದರು.ಪಿಜಿ, ಡಿಪ್ಲೋಮಾ ಇನ್ ಯೋಗ ಸ್ಟಡೀಸ್ ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ಸುಧಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಇವರಿಂದ ವಚನ ಸಂಗೀತ ನಡೆಯಿತು. ಧರ್ಮಗ್ರಂಥ ಪಠಣ ಕುಸುಮಾ ಬಿ ಇಟಗಿ ಹಾಗೂ ವಚನ ಚಿಂತನ ಮಲ್ಲಿಕಾರ್ಜುನ ಬಿ.ಇಟಗಿ ನೆರವೇರಿಸಿದರು. ದಾಸೋಹ ಸೇವೆಯನ್ನು ಹುಬ್ಬಳ್ಳಿಯ ಡಾ. ಎಸ್.ಎಸ್. ಮಹಾದೇವಿ ಹಾಗೂ ಹಾವೇರಿಯ ಸೋಮಶೇಖರ ಶಿವಪ್ಪ ಅನೂರಶಟ್ರ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ ಇದ್ದರು. ವಿದ್ಯಾವತಿ ಪ್ರಭು ಗಂಜಿಹಾಳ ನಿರೂಪಿಸಿದರು. ಶಿವಾನಂದ ಹೊಂಬಳ ಸ್ವಾಗತಿಸಿದರು.