ಕಾಲಚಕ್ರ ನಾಟಕ: ರಂಗಾಯಣ ಕಲಾವಿದರ ಮನೋಜ್ಞ ಅಭಿನಯ

| Published : Nov 14 2025, 01:15 AM IST

ಸಾರಾಂಶ

ಪತ್ರಕರ್ತರಾದವರು ವರಿದಿಗಾರಿಕೆ ಕಾಯಕದಲ್ಲಿ ಸುಖ- ದುಃಖದ ಎಲ್ಲಾ ಸನ್ನಿವೇಶಗಳಿಗೆ ಮುಖಾಮುಖಿಯಾದ್ರೂ ಆಯಾ ಸಮಯ- ಸಂದರ್ಭಕ್ಕೆ ಭೌತಿಕವಾಗಿ ಸ್ಪಂದಿಸೋದಕ್ಕಿಂತ ರಿಪೋರ್ಟಿಂಗ್‌ ನಲ್ಲೇ ತಾವು ಕಂಡುಂಡ ಸನ್ನಿವೇಶಗಳಿಗೆ ಸೂಕ್ಷ್ಮ ಸಂವೇದಿಯಾಗ್ತಾರೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಪತ್ರಕರ್ತರಾದವರು ವರಿದಿಗಾರಿಕೆ ಕಾಯಕದಲ್ಲಿ ಸುಖ- ದುಃಖದ ಎಲ್ಲಾ ಸನ್ನಿವೇಶಗಳಿಗೆ ಮುಖಾಮುಖಿಯಾದ್ರೂ ಆಯಾ ಸಮಯ- ಸಂದರ್ಭಕ್ಕೆ ಭೌತಿಕವಾಗಿ ಸ್ಪಂದಿಸೋದಕ್ಕಿಂತ ರಿಪೋರ್ಟಿಂಗ್‌ ನಲ್ಲೇ ತಾವು ಕಂಡುಂಡ ಸನ್ನಿವೇಶಗಳಿಗೆ ಸೂಕ್ಷ್ಮ ಸಂವೇದಿಯಾಗ್ತಾರೆ.

ರಂಗಾಯಣದ ಸಭಾಂಗಣದಲ್ಲಿ ಕಾಲಚಕ್ರ ನಾಟಕ ನೋಡಿದ ಹಿರಿಯ, ಕಿರಿಯ ಪತ್ರಕರ್ತರೆಲ್ಲರೂ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಮಾಧ್ಯಮದವರಿಗಾಗಿಯೆ ನಡೆದ ವಿಶೇಷ ಪ್ರದರ್ಶನದಲ್ಲಿ ಎಲ್ಲರ ಮನೆ ಕಥೆಯಾಗಿರುವ ವಯೋವೃದ್ಧರ ನಿರ್ಲಕ್ಷ್ಯ ವಿಷಯದ, ಮರಾಠಿ ರಂಗಭೂಮಿ ಹೆಸರಾಂತ ನಾಟಕರಾರ ಜಯವಂತ ದಳ್ವಿ ರಚಿಸಿದ “ಕಾಲಚಕ್ರ” ನಾಟಕ, ಅಲ್ಲಿ ಸನ್ನಿವೇಶಗಳಲ್ಲಿ 2 ಗಂಟೆ ಕಳೆದು ಹೋದ ಪತ್ರಕರ್ತರು ಮೊಬೈಲ್‌ ಕೂಡಾ ದಿಟ್ಟಿಸದೆ ನಾಟಕದಲ್ಲಿ ಮುಳುಗಿ ಹಲವು ಸನ್ನಿವೇಶಗಳಿಗೆ ಕಣ್ಣೀರಾದರು.

ಮರಾಠಿ ರಂಗೂಮಿಯ ಜಯವಂತ ದಳ್ವಿ ರಚಿಸಿದ, ಕನ್ನಡಕ್ಕೆ ಎಚ್‌ ಕೆ ಕರ್ಕೇರ್‌ ಅನುವಾದಿಸಿರುವ ಕಾಲಚಕ್ರ ವೃದ್ಧ ದಂಪತಿ, ಅವರ ಇಬ್ಬರು ಗಂಡು ಮಕ್ಕಳು, ಪೋಷಕರ ಪ್ರತಿ ಮಕ್ಕಳ ಅಸಡ್ಡೆಯ ಭಾವನೆ, ವೃದ್ಧ ದಂಪತಿಯನ್ನು ದತ್ತು ಪಡೆಯುವ ಹಂಬಲದ ಯುವಕನ ಕುಟುಂಬ ಸುತ್ತ ಆವರಿಸಿಕೊಂಡಿರುವ ನಾಟಕ.

ದತ್ತು ಪದ್ಧತಿಗೆ ಹೊಸ ವ್ಯಾಖ್ಯೆ

ಕಾಯಿಲೆಯಿಂದ ನರಳುತ್ತಿರುವ ತಾಯಿ, ವಯೋವೃದ್ಧ ತಂದೆಯನ್ನು ನಿರ್ಲಕ್ಷಿಸುವ ಮಕ್ಕಳು-ಸೊಸೆಯಂದಿರು. ಹೆತ್ತವರನ್ನು ವೃದ್ಧಾಶ್ರಮಕ್ಕಟ್ಟಲು ಮುಂದಾಗುತ್ತಾರೆ, ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ದಂಪತಿ " ಯಾರಿಗೆ ಮಕ್ಕಳಿಲ್ಲವೊ ಅಂತವರು ಮಕ್ಕಳನ್ನು ದತ್ತು ತೆಗೆದು ಕೊಳ್ಳುತ್ತಾರೆ. ಹಾಗೆಯೇ ಯಾರಿಗೆ ತಂದೆ-ತಾಯಿ ಇಲ್ಲವೊ ಅಥವಾ ಅಜ್ಜ-ಅಜ್ಜಿ ಇಲ್ಲವೊ ಅಂತವರು ಯಾಕೆ ಈ ಮುದುಕರನ್ನು ದತ್ತು ತೆಗೆದುಕೊಳ್ಳಬಾರದು? ಇಚ್ಚಿಸುವುದಾದರೆ 70-75 ವಯಸ್ಸಿನ ಇಬ್ಬರು ವೃದ್ಧ ದಂಪತಿಗಳಿದ್ದಾರೆ. ಅವರನ್ನು ಕರೆದು ಕೊಂಡು ಹೋಗಿ” ಎಂದು ದಿನ ಪತ್ರಿಕೆಯಲ್ಲಿ ಪ್ರಕಟಣೆ ನೀಡುತ್ತಾರೆ. ಇದನ್ನು ಓದಿದ ಉಪನ್ಯಾಸಕರೊಬ್ಬರು ವಯೋವೃದ್ಧರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಇಳಿ ವಯಸ್ಸಿನಲ್ಲಿ ಅವರ ಆರೈಕೆ ಮಾಡುವ ಮೂಲಕ ವಯೋವೃದ್ಧರು ಎಂದಿಗೂ ಹೊರೆಯಲ್ಲವೆಂಬ ಸಂದೇಶ ನಾಟಕದಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ. ---

ವೃದ್ಧ ಪೋಷಕರು ಹೊರೆ ಎಂಬ ಮಕ್ಕಳು, ಸೊಸೆಯಂದಿರ ಮನೋವ್ಯಾಪಾರ, ಮಕ್ಕಳ ಮೇಲಿನ ವೃದ್ಧರ ಅವಲಂಬನೆ, ಭವಿಷ್ಯದ ಅನಿಶ್ಚಿತತೆಗಳು, ಕುಟುಂಬ ಸದಸ್ಯರ ನಿರ್ಲಕ್ಷ್ಯ, ಸಾಮಾಜಿಕ ಸಂಪರ್ಕಗಳ ಕೊರತೆಯಿಂದ ಹಿರಿಯರು ಅನುಭವಿಸುತ್ತಿರುವ ಒಂಟಿತನದ ವೇದನೆ, ವೃದ್ಧಾಪ್ಯದ ಸೂಕ್ಷ್ಮ ಸಂವೇದನೆಗಳು ಕಾಲಚಕ್ರದ ಎಲ್ಲ ಸನ್ನಿವೇಶಗಳಲ್ಲಿ ಸೊಗಸಾಗಿ ಮೂಡಿಬಂದಿವೆ.

ಮೈಸೂರು ರಂಗಾಯಣದ ಹಿರಿಯ ಕಲಾವಿದ ಹುಲುಗಪ್ಪ ಕಟ್ಟಿಮನಿ ಸಮರ್ಥವಾಗಿ ನಿರ್ದಶಿಸಿದ್ದಾರೆ.

---

ವಯೋವೃದ್ಧರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ "ಕಾಲಚಕ್ರ " ನಾಟಕ, ಎಲ್ಲರ ಮನೆ ಕತೆಯಾಗಿ ಸರ್ವಕಾಲಕ್ಕೂ ಸಲ್ಲುವ ನಾಟಕ. ಕುಟುಂಬ ಸದಸ್ಯರ ನಿರ್ಲಕ್ಷದಿಂದ ಹಿರಿಯ ಜೀವಿಗಳು ಪಡುವ ಸಂಕಷ್ಟ, ಒಂಟಿತನದ ವೇದನೆ ಒಳಗೊಂಡಿದೆ. ವಿಶೇಷವಾಗಿ ಯುವ ಪೀಳಿಗೆ, ಉದ್ಯೋಗಸ್ಥ ಜನರು ಇದನ್ನು ವೀಕ್ಷಿಸಬೇಕಿದೆ.

-ಡಾ. ಸುಜಾತಾ ಜಂಗಮಶೆಟ್ಟಿ, ನಿರ್ದೇಶಕರು, ರಂಗಾಯಣ, ಕಲಬುರಗಿ

---

ಜೀವನದಾಗ ತಂದೆ - ತಾಯಿ ದೊಡ್ಡವರು, ಅವರ ಗೌರವ ಮರ್ಯಾದಿ ಉಳಸೋ ಕೆಲ್ಸ ಮಕ್ಕಳು ಮಾಡಬೇಕ್ರಿ, ಇಂಥಾ ನಾಟಕ ಮಾಡಿ ನೀವು ಪುಣ್ಯಾದ ಕೆಲ್ಸ ಮಾಡೀರಿ. ನಾಟಕ ನೋಡ್ತಿದ್ಹಂಗೆ ಕಣ್ಣಿರು ಹಂಗೇ ಬರ್ತಿತ್ತು. ಪೋಷಕರಿಗೆ ಮಕ್ಕಳು ಚೆನ್ನಾಗಿ ನೋಡ್ಕೋಬೇಕ್ರಿ.

-ಗಂಗಮ್ಮ ಗುದ್ದಿ, ಕಲಬುರಗಿ