ವೇದಿಕೆಯಲ್ಲಿ ಮೊದಲು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದನ್ನು ಮರೆತು ವೇದಿಕೆ ಹಿಂಭಾಗದಲ್ಲಿ ಇಟ್ಟು ತಾಯಿ ಭುವನೇಶ್ವರಿಗೆ ಅಪಮಾನ ಮಾಡಿದ್ದಾರೆ.

ಕಲಘಟಗಿ: ನಾಡು ನುಡಿಯನ್ನು ಗೌರವಿಸಿ ಪೂಜಿಸುವ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ತಾಲೂಕು ಆಡಳಿತದ ನಿರ್ಲಕ್ಷ್ಯತೆಯಿಂದ ಈ ಬಾರಿ ಕಾಟಾಚಾರಕ್ಕೆ ಕನ್ನಡ ರಾಜ್ಯೋತ್ಸವ ಆಚರಿಸಿರುವುದು ಕಂಡುಬಂದಿತು. ಆಚರಣೆಯಲ್ಲಿ ಎಡವಟ್ಟು ಮಾಡಿ ಕನ್ನಡಾಭಿಮಾನಿಗಳಿಗೆ ಹಾಗೂ ಹಿರಿಯ ಕನ್ನಡ ಕಲಾವಿದರಿಗೆ ಹಾಗೂ ಸಾಹಿತ್ಯಾಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿದ ಘಟನೆ ಜರುಗಿದೆ.

ವೇದಿಕೆಯಲ್ಲಿ ಮೊದಲು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದನ್ನು ಮರೆತು ವೇದಿಕೆ ಹಿಂಭಾಗದಲ್ಲಿ ಇಟ್ಟು ತಾಯಿ ಭುವನೇಶ್ವರಿಗೆ ಅಪಮಾನ ಮಾಡಿದ್ದಾರೆ. ಈ ಹಿಂದೆ ಸನ್ಮಾನ ಮಾಡಿದವರನ್ನೇ ಮತ್ತೆ ಮತ್ತೆ ಸನ್ಮಾನ ಮಾಡಿ ಇನ್ನುಳಿದ ಸಾಧಕರನ್ನು ಕಡೆಗಣಿಸಿದ್ದಾರೆ. ತಾಲೂಕು ಆಡಳಿತದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೆಲವು ಅಧಿಕಾರಿಗಳು ಬಾರದೆ ಇಲಾಖೆಯ ಸಿಬ್ಬಂದಿಗಳನ್ನು ಕಳಿಸಿರುವುದು ಕಂಡುಬಂದಿತು.

ಕನ್ನಡ ರಾಜ್ಯೋತ್ಸವಕ್ಕೆ ಬಹುತೇಕ ಸರ್ಕಾರಿ ಅಧಿಕಾರಿಗಳ ಗೈರು, ಧ್ವಜಾರೋಹಣ ಸಮಯ ಪರಿಪಾಲನೆ ಮಾಡದಿರುವುದು, ಕೆಲ ಸಂಘಟನೆಗಳ ಲಾಬಿಗೆ ಮಣಿದು ಸನ್ಮಾನಿತರ ಆಯ್ಕೆ ಮಾಡಿದ್ದು, ವೇದಿಕೆ ಮೇಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಡ್ಡಿಪಡಿಸಿ ಆಹ್ವಾನಿತರಿಗೆ ಸನ್ಮಾನ ಮಾಡಿರುವುದು ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಯಿತು. ಇದೆಲ್ಲ ನೋಡಿದರೆ ಕರ್ನಾಟಕ ರಾಜ್ಯೋತ್ಸವ ಕಾಟಾಚಾರಕ್ಕೆ ಆಚರಣೆ ಮಾಡಿದಂತೆ ಕಂಡುಬಂದಿತು.