ಸಾರಾಂಶ
ಮೈಸೂರಿನ ಮಹಾರಾಜರ ಕಾಲದಿಂದ ರಂಗಭೂಮಿಯ ಪರಂಪರೆ ಬೆಳೆದಿದೆ. ಆದರೆ, ಈಗ ರಂಗಭೂಮಿ ಕ್ಲಿಷ್ಟವಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ರಂಗಭೂಮಿಯಲ್ಲಿ ಸಮನ್ವಯತೆ ಮುಖ್ಯ. ಎಲ್ಲರನ್ನು ರಂಗದ ಮೇಲೆ ತರುವ ಸಮನ್ವಯತೆ ಸಾಧಿಸುವುದು ಅತಿ ಮುಖ್ಯ ಎಂದು ರಂಗಾಯಣದ ಮಾಜಿ ನಿರ್ದೇಶಕ, ಹಿರಿಯ ರಂಗಕರ್ಮಿ ಜನಾರ್ಧನ್ ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರ ಆವರಣದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಶನಿವಾರ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಮಹಾರಾಜರ ಕಾಲದಿಂದ ರಂಗಭೂಮಿಯ ಪರಂಪರೆ ಬೆಳೆದಿದೆ. ಆದರೆ, ಈಗ ರಂಗಭೂಮಿ ಕ್ಲಿಷ್ಟವಾಗಿದೆ ಎಂದರು.ಈಗಿನ ಯುವ ತಲೆಮಾರಿಗೆ ಓದಿನ ಕೊರತೆಯಿದೆ, ಶ್ರದ್ಧೆಯಿಲ್ಲ. ಇದಕ್ಕಾಗಿ ಸಂಘಟನೆಯ ಮೂಲಕ ಯುವ ತಲೆಮಾರನ್ನು ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕೇವಲ ನಗರಕ್ಕೆ ಸೀಮಿತವಾಗದೆ, ಗ್ರಾಮೀಣದಲ್ಲೂ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಿಗೆ ಒತ್ತು ನೀಡಬೇಕಿದೆ. ಈ ಮೂಲಕ ಕನ್ನಡ ರಂಗಭೂಮಿ ಕಟ್ಟೋಣ ಎಂದು ಅವರು ಕರೆ ನೀಡಿದರು.ನಟ, ನಿರ್ದೇಶಕ, ಮೇಕಪ್ ಮಾಡುವವರು ರಂಗಭೂಮಿಗೆ ಬೇಕು. ಎಲ್ಲಕ್ಕಿಂತ ಸಂಘಟಕ ಮುಖ್ಯ. ಇದನ್ನು ಅರಿಯಬೇಕಿದೆ. ಇದಕ್ಕಾಗಿ ಸಮುದಾಯದಲ್ಲೆ ಬೆರೆಯುವಂತಾಗಬೇಕು. ಸಮುದಾಯ ಸಂಘಟನೆಯ ಮೂಲಕ ರಂಗಭೂಮಿಗೆ ಬಂದೆ. ಈಗ ರಂಗಭೂಮಿಗೆ ಅನೇಕರು ಬರುತ್ತಿದ್ದರೂ ಸಮುದಾಯದ ಒಡನಾಟವಿರಲಿ ಎಂದು ಅವರು ಹೇಳಿದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಮು, ರಂಗ ಕಲಾವಿದರಾದ ಸರೋಜಾ ಹೆಗಡೆ, ನೂರ್ ಅಹಮ್ಮದ್ ಶೇಖ್, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ತಲಕಾಡು ಇದ್ದರು. ಚಂದ್ರಶೇಖರಾಚಾರ್ ರಂಗಗೀತೆ ಹಾಡಿದರು. ಮೋಹನ್ ರಾಜ್ ಶೆಟ್ಟಿ ಸ್ವಾಗತಿಸಿದರು. ಅಬ್ದುಲ್ ಕರೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾತ್ಯಾಯಿನಿ ಯಶೋಮಿತ್ರ ನಿರೂಪಿಸಿದರು.