ಸಾರಾಂಶ
ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕೂಡ ಕನ್ನಡದಲ್ಲಿ ಸಹಿ ಮಾಡುವುದನ್ನು ಕಡತಗಳಲ್ಲಿ ದಾಖಲಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡದಲ್ಲಿ ಸಹಿ ಹಾಕುವುದು, ಕನ್ನಡದಲ್ಲಿ ಮಾತನಾಡುವುದು ರೋಮಾಂಚನವನ್ನು ಉಂಟು ಮಾಡುತ್ತದೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಮೈಸೂರು ವಿಭಾಗವು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕರುನಾಡ ಹಬ್ಬವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನಾನು ಇವತ್ತಿಗೂ ಕನ್ನಡದಲ್ಲಿ ಸಹಿ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಅದು ಒಂದು ರೀತಿಯಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಅದೇ ರೀತಿ ನೀವುಗಳು ಅಂದರೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕೂಡ ಕನ್ನಡದಲ್ಲಿ ಸಹಿ ಮಾಡುವುದನ್ನು ಕಡತಗಳಲ್ಲಿ ದಾಖಲಿಸಬೇಕು. ಜೊತೆಗೆ ಮನೆಯಲ್ಲಿ ಕೂಡ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಆಗ ಮಾತ್ರ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ ಎಂದು ಅವರು ಹೇಳಿದರು.ಕನ್ನಡ ಪ್ರಾಧ್ಯಾಪಕ ಡಾ.ಎಂ.ಬಿ. ಮಂಜುನಾಥ್ ಮಾತನಾಡಿ, ಡಾ.ಬಿ.ಜಿ.ಎಲ್. ಸ್ವಾಮಿ ಅವರ ಮಾತೃಭಾಷೆ ತಮಿಳು ಆಗಿದ್ದರೂ ಕನ್ನಡ ಭಾಷೆ ಅದಕ್ಕಿಂತಲೂ ಪ್ರಾಚೀನವಾದದ್ದು ಎನ್ನುವುದನ್ನು ದಾಖಲಿಸಿದ್ದಾರೆ ಎಂದರು.ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕ ಡಾ. ಮೈಸೂರು ಉಮೇಶ್ ಮಾತನಾಡಿ, ನಮ್ಮ ದಿನ ನಿತ್ಯದಲ್ಲೂ ಕನ್ನಡದ ಬಳಕೆ ನಿರಂತರವಾಗಬೇಕು ಎಂದು ಸಲಹೆ ನೀಡಿದರು.ಪ್ರಾಂತೀಯ ಕಚೇರಿ ಹೆಚ್ಚುವರಿ ನಿರ್ದೇಶಕ ಸಿದ್ದರಾಜು ಮಾತನಾಡಿ, ಇನ್ನೂ ಮುಂದೆ ಪ್ರತಿ ವರ್ಷವೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಒಟ್ಟಾಗಿ ಸೇರಿ ಕರುನಾಡ ಹಬ್ಬ, ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಆಶಿಸಿದರು.ಇಲಾಖೆಯ ಮೈಸೂರು ವಿಭಾಗದ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಪ್ರಜ್ಞಾ ಪ್ರಾರ್ಥಿಸಿದರು. ನೂತನಾ ಸ್ವಾಗತಿಸಿದರು. ಎಂ. ಸಿದ್ದರಾಜು ವಂದಿಸಿದರು.