ಕಳಸಾ ಬಂಡೂರಿಗೆ ಅರಣ್ಯ, ಪರಿಸರ ಇಲಾಖೆ ಅನುಮತಿಗೆ ಆಗ್ರಹ

| Published : Jan 17 2024, 01:45 AM IST

ಸಾರಾಂಶ

ಕಳಸಾ ಬಂಡೂರಿ, ಮಹದಾಯಿ ಕಾಮಗಾರಿ ಆರಂಭಿಸಲು ಅರಣ್ಯ ಮತ್ತು ಪರಿಸರ ಹಾಗೂ ಜೈವಿಕ ಇಲಾಖೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ನರಗುಂದದಲ್ಲಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿದರು.

ನರಗುಂದ: ಕಳಸಾ ಬಂಡೂರಿ, ಮಹದಾಯಿ ಕಾಮಗಾರಿ ಆರಂಭಿಸಲು ಅರಣ್ಯ ಮತ್ತು ಪರಿಸರ ಹಾಗೂ ಜೈವಿಕ ಇಲಾಖೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ನರಗುಂದದಲ್ಲಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿದರು.ಮಂಗಳವಾರ ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ರಾಜ್ಯ ರೈತ ಸೇನೆ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ ಮಾಲಾರ್ಪಣೆ ಮಾಡಿ ಹೋರಾಟಕ್ಕೆ ಚಾಲನೆ ನೀಡಿದರು.ಅನಂತರ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಕುಡಿಯುವ ನೀರಿನ ಯೋಜನೆಯನ್ನು ಸರ್ಕಾರ ಜಾರಿ ಮಾಡಬೇಕು ಎಂದರು.ಕಳಸಾ ಬಂಡೂರಿ, ಮಹದಾಯಿ ಕಾಮಗಾರಿ ಯೋಜನೆ ಕಾಮಗಾರಿಗೆ ಆಗ್ರಹಿಸಿ ಕಳೆದ 9 ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಆದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ಇಲಾಖೆಗಳ ಅನುಮತಿ ನೆಪ ಒಡ್ಡಿ. ವಿಳಂಬ ನೀತಿ ಅನುಸರಿಸುತ್ತಿವೆ‌. ಇದು ಸಲ್ಲದು. ಫೆ‌. 1ರೊಳಗೆ ಅರಣ್ಯ, ಪರಿಸರ , ಹಾಗೂ ಜೈವಿಕ ಇಲಾಖೆ ಕಾಮಗಾರಿ ಆರಂಭಿಸಲು ಅನುಮತಿ ನೀಡಬೇಕು. ಸರ್ಕಾರ ಅನುಮತಿ ನೀಡದಿದ್ದರೆ ಫೆ.1ರ ನಂತರ ರೈತರೊಂದಿಗೆ ಬೆಂಗಳೂರು ರಾಜ್ಯ ಅರಣ್ಯ ಹಾಗೂ ಜೈವಿಕ ಇಲಾಖೆ ಕಚೇರಿ ಎದುರಿಗೆ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜಕೀಯ ಇಚ್ಛಾಶಕ್ತಿ ಕೊರತೆ ಹೆಚ್ಚಾಗಿದೆ. ಕಳಸಾ ,ಹಳತಾರ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಿದ್ದರೂ ವಿವಿಧ ಇಲಾಖೆಗಳ, ಅನುಮತಿ. ನೆಪ ಒಡ್ಡಿ ಸ್ಥಗಿತಗೊಳಿಸಲಾಗಿದೆ ಬಂಡೂರಿ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಹೀಗಾದರೆ ಮಲಪ್ರಭೆಗೆ ಕಳಸಾ ಬಂಡೂರಿ, ಮಹದಾಯಿ ನದಿ ನೀರೂ ಹರಿಯುವುದು ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ ಈಚೆಗಷ್ಟೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವಿಶೇಷ ಸಮಿತಿ ಸದಸ್ಯರು ಕಳಸಾ ಬಂಡೂರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಎಲ್ಲವನ್ನೂ ಅವಲೋಕಿಸಿ ಈ ಭಾಗದ ರೈತ ಹಿತದೃಷ್ಟಿಯಿಂದ ಕೂಡಲೇ ಕಾಮಗಾರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಅನುಮತಿ ನೀಡಿ ಕಾಮಗಾರಿ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ರೈತರ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಹೇಳಿದರು.

ಕಳೆದ 9 ವರ್ಷಗಳಿಂದ ಮಹದಾಯಿಗಾಗಿ ಹೋರಾಟ ನಡೆಯುತ್ತಿದೆ. ಇದಕ್ಕಾಗಿ 15 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ರೈತ ಬಂಡಾಯ ನಡೆದ ನಾಲ್ಕು ದಶಕ ಕಳೆದರೂ ಸ್ವಂತ ಜಾಗೆಯಲ್ಲಿ ರೈತ ಸ್ಮಾರಕ ನಿರ್ಮಾಣವಾಗಿಲ್ಲ. ಆದ್ದರಿಂದ ಹೋರಾಟದ ವೇದಿಕೆ ಸಮೀಪ ಇರುವ ನೀರಾವರಿ ಇಲಾಖೆಯ ಸ.ನಂ.2ರಲ್ಲಿನ ಎರಡು ಎಕರೆ ಭೂಮಿಯನ್ನು ರೈತ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನೀಡಬೇಕು. ಇಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ.₹ 10 ಕೋಟಿ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು‌.

ತಹಸೀಲ್ದಾರ ಶ್ರೀಶೈಲ ತಳವಾರವರು ರೈತರ ಮನವಿ ಸ್ವೀಕರಿಸಿ ಸರ್ಕಾರ ರವಾನೆ ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಪ್ಪ ಹೊರಕೇರಿ, ತಿಪ್ಪಣ್ಣ ಮೇಟಿ, ಗುರು ರಾಯನಗೌಡ್ರ, ಮಲ್ಲಣ್ಣ ಅಲೆಕಾರ, ವೀರಭಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನುಮಂತ ಸರನಆಯ್ಕರ, ಶಿವಪ್ಪ ಸಾತನ್ನವರ, ಎಸ್.ಬಿ.ಜೋಗಣ್ಣವರ, ಎ.ಪಿ.ಪಾಟೀಲ್, ಲೀಲಕ್ಕ ಹಸಬಿ, ವಾಸು ಚವ್ಹಾಣ, ಮಲ್ಲೇಶ್ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ವಿಜಯಕುಮಾರ್ ಹೂಗಾರ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಬಸವ್ವ ಪೂಜಾರಿ, ಚನ್ನಬಸವ್ವ ಆಯಿಟ್ಟಿ ಹಾಗೂ ರೈತ ಸೇನೆಯ ಪದಾಧಿಕಾರಿಗಳು, ಸವದತ್ತಿ, ಬದಾಮಿ, ನವಲಗುಂದ,ರೋಣ ತಾಲೂಕಿನ ವಿವಿಧ. ಗ್ರಾಮಗಳ. ಸದಸ್ಯರು ಭಾಗವಹಿಸಿದ್ದರು.