ಕಳಸಾ- ಬಂಡೂರಿ: ಜೋಶಿ ಮನೆ ಎದುರಿಗೆ ಪ್ರತಿಭಟನೆ

| Published : Feb 27 2024, 01:37 AM IST

ಸಾರಾಂಶ

ಬೆಳಗ್ಗೆ ಸಚಿವ ಜೋಶಿ ಮನೆ ಎದುರಿಗೆ ಜಮೆಯಾದ ಕಳಸಾ- ಬಂಡೂರಿ ಹೋರಾಟಗಾರರು, ಸಚಿವರು ಹೊರ ಬರುತ್ತಿದ್ದಂತೆ ಪ್ರತಿಭಟನೆ ಶುರು ಮಾಡಿದರು. ನೀತಿ ಸಂಹಿತೆ ಜಾರಿಗೂ ಮುನ್ನವೇ ಕಳಸಾ- ಬಂಡೂರಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳಸಾ-ಬಂಡೂರಿ ನಾಲಾ ಜೋಡಣೆ, ಮಹದಾಯಿ ಯೋಜನೆ ವಿಳಂಬ ಖಂಡಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆಯ ಎದುರು ಕಳಸಾ-ಬಂಡೂರಿ ಹೋರಾಟಗಾರರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ನೀತಿ ಸಂಹಿತೆ ಜಾರಿಗೂ ಮುನ್ನವೇ ಕಳಸಾ- ಬಂಡೂರಿ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದಲ್ಲಿ ಚುನಾವಣೆ ಸಮಯದಲ್ಲಿ ನಿಮ್ಮ ವಾಹನಗಳನ್ನೇ ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು.

ಬೆಳಗ್ಗೆ ಸಚಿವ ಜೋಶಿ ಮನೆ ಎದುರಿಗೆ ಜಮೆಯಾದ ಕಳಸಾ- ಬಂಡೂರಿ ಹೋರಾಟಗಾರರು, ಸಚಿವರು ಹೊರ ಬರುತ್ತಿದ್ದಂತೆ ಪ್ರತಿಭಟನೆ ಶುರು ಮಾಡಿದರು. ಲೋಕಸಭೆ ಚುನಾವಣೆ ಬರುತ್ತಿದೆ. ಮಹದಾಯಿ ತೀರ್ಪು ಬಂದು ಆಗಲೇ 6 ವರ್ಷವೇ ಆಗಿದೆ. ಆದರೂ ಈ ವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ನಿಮ್ಮ ಮೇಲೆ ಅವರು (ಕಾಂಗ್ರೆಸ್‌), ಅವರ ಮೇಲೆ ನೀವು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದೀರಿ. ಆದರೆ ಕಾಮಗಾರಿ ಮಾತ್ರ ಆರಂಭವೇ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಸಚಿವ ಜೋಶಿ, ಮನವಿ ಸ್ವೀಕರಿಸಿ, ತಮ್ಮ ತಪ್ಪು ಏನೂ ಇಲ್ಲ. ಡಿಪಿಆರ್‌ ಒಪ್ಪಿಗೆ ಕೊಟ್ಟಾಗಿದೆ. ಪರಿಸರ ಇಲಾಖೆಯದ್ದು ಸಮಸ್ಯೆಯಿಲ್ಲ. ವನ್ಯಜೀವಿ ಮಂಡಳಿಯ ಅನುಮತಿ ಬೇಕಿದೆ. ಕೆಲವೊಂದಿಷ್ಟು ಮಾಹಿತಿಯನ್ನು ರಾಜ್ಯ ಸರ್ಕಾರದಿಂದ ಕೇಳಿದೆ. ಆದರೆ ಈ ವರೆಗೂ ರಾಜ್ಯ ಸರ್ಕಾರ ಆ ಮಾಹಿತಿಯನ್ನು ನೀಡಿಲ್ಲ. ಅದು ಮಾಹಿತಿ ನೀಡುತ್ತಿದ್ದಂತೆ ವನ್ಯಜೀವಿ ಮಂಡಳಿಯಿಂದಲೂ ಅನುಮತಿ ಕೊಡಿಸುತ್ತೇನೆ ಎಂದು ತಿಳಿಸಿದರು.

ಅದಕ್ಕೆ ಹೋರಾಟಗಾರರು, ಅದೇನೋ ಗೊತ್ತಿಲ್ಲ. ಆದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಪ್ರಾರಂಭವಾಗುವ ಮುನ್ನವೇ ನಮಗೆ ಕಾಮಗಾರಿ ಆರಂಭವಾಗಬೇಕು. ಈ ಸಂಬಂಧ ನೀವು, ಶಾಸಕರು ಇಬ್ಬರು ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿ, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಚುನಾವಣೆ ವೇಳೆ ನಿಮ್ಮ ಕಾರನ್ನು ತಡೆಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.

ಬಳಿಕ ಹೋರಾಟಗಾರರನ್ನು ಸಮಾಧಾನ ಪಡಿಸಿ, ಪ್ರಾರಂಭಿಸೋಣ ಎನ್ನುತ್ತಾ ಕಾರನ್ನೇರಿ ಸಚಿವರು ಅಲ್ಲಿಂದ ತೆರಳಿದರು. ಪ್ರತಿಭಟನೆಯಲ್ಲಿ ಸುಭಾಶ್ಚಂದ್ರಗೌಡ ಪಾಟೀಲ ಸೇರಿದಂತೆ ಹಲವರಿದ್ದರು.

ವನ್ಯಜೀವಿ, ಅರಣ್ಯ ಇಲಾಖೆ ಅನುಮತಿ ಕೊಡಿಸಿಕನ್ನಡಪ್ರಭ ವಾರ್ತೆ ನವಲಗುಂದಮಹದಾಯಿ, ಕಳಸಾ ಬಂಡೂರಿ ಯೋಜನೆಯ ವನ್ಯಜೀವಿ, ಅರಣ್ಯ ಇಲಾಖೆ ಹಾಗೂ ಇತರ ಅನುಮತಿ ಕೊಡಿಸಬೇಕು ಎಂದು ಅಣ್ಣಿಗೇರಿ ರೈಲ್ವೆ ಗೇಟ್ ಉದ್ಘಾಟನೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ರಘುನಾಥ ನಡುವಿನಮನಿ, 2015ರಲ್ಲಿ ಹೋರಾಟ ಪ್ರಾರಂಭವಾಗಿ, ಕೋರ್ಟ್‌ ಅಂತಿಮ ಆದೇಶವಾಗಿ, ಗೆಜೆಟ್ ನೋಟಿಫಿಕೇಶನ್‌ ಹೊರಡಿಸಿದ್ದರೂ ಕಾಮಗಾರಿಗೆ ಚಾಲನೆ ಸಿಗದಿರುವುದು ದುರ್ದೈವ. ಅರಣ್ಯ ಇಲಾಖೆ ಕಚೇರಿಯ ಅನುಮತಿ ಸಿಗದೆ 5 ವರ್ಷ ಕಳೆದಿದೆ. ಕೂಡಲೆ ಅನುಮತಿಯನ್ನು ದೊರಕಿಸಿ ಕೊಡಿ, ಹೋರಾಟಗಾರರ ಮೇಲಿನ ರೈಲ್ವೆ ಮತ್ತು ಬಿಎಸ್‌ಎನ್‌ಎಲ್‌ ಕೇಸುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಬೆಳೆ ವಿಮೆಯಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಹೆಸರಿನ ಬೆಳೆಯಲ್ಲಿನ ಲೋಪವನ್ನು ಸರಿಪಡಿಸಬೇಕು. ನೀರಿನ ವಿಷಯದಲ್ಲಿ ರಾಜಕೀಯ ಆಗಬಾರದು. ಹುಬ್ಬಳ್ಳಿ-ಧಾರವಾಡ ಮಹಾ ಜನತೆಗೆ ಕುಡಿಯಲು ಮಂಜೂರಾದ ನೀರನ್ನು ದೊರಕಿಸಿಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ. ನಮ್ಮ ಕೃಷಿ ನೀರನ್ನು ನಮಗೆ ಬಿಡಬೇಕು. ಹುಬ್ಬಳ್ಳಿ-ಧಾರವಾಡ ಜನತೆಗೆ ನೀರಿನ ತೊಂದರೆಯಾದಲ್ಲಿ ಅದಕ್ಕೆ ಸಂಪೂರ್ಣ ತಾವೆ ಜವಾಬ್ದಾರರು ಎಂದು ಎಚ್ಚರಿಸಿದರು.ರೈತ ಹೋರಾಟಗಾರರಾದ ಮಲ್ಲಿಕಾರ್ಜುನ ಗೌಡಕುಲಕರ್ಣಿ, ಫಕೀರಗೌಡ ಗೊಬ್ಬರಗುಪ್ಪಿ, ಎಂ.ಜಿ. ಶಲವಡಿ, ನಿಂಗಪ್ಪ ನಾವಳ್ಳಿ, ಎ.ಪಿ. ಗುರಿಕಾರ, ಪುಟ್ಟಣ್ಣ ಭಾಗವಾನ ಇದ್ದರು.