Kalasa Block Congress decides to submit a memorandum to the CM.
ಕನ್ನಡಪ್ರಭ ವಾರ್ತೆ ಕಳಸ
ಮುಖ್ಯಮಂತ್ರಿ ಶಿವಕುಮಾರ್ ಬಾಳೆಹೊನ್ನೂರಿಗೆ ಇದೇ 19ರ ಶನಿವಾರ ಬಂದಾಗ ಅವರನ್ನು ಭೇಟಿ ಮಾಡಿ ಕಳಸ ತಾಲೂಕಿನ ಭೂಮಿ ಸಮಸ್ಯೆ ಬಗ್ಗೆ ಅವರಿಗೆ ಮನನ ಮಾಡುವ ಪ್ರಯತ್ನ ಮಾಡುವುದಾಗಿ ಇಲ್ಲಿನ ಕಳಸ ಬ್ಲಾಕ್ ಕಾಂಗ್ರೆಸ್ ತಿಳಿಸಿದೆ.ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಘಟಕದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಕಳಸ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆಯಿಂದ ಆರಂಭಿಸಿ ಕಸ್ತೂರಿರಂಗನ್‍ವರೆಗೆ ಅನೇಕ ಸಮಸ್ಯೆಗಳು ಜ್ವಲಂತವಾಗಿವೆ. ಭೂಮಿ ಹಕ್ಕಿಗಾಗಿ ಹೋರಾಟ ನಡೆಯುತ್ತಲೇ ಇದೆ. ಮಲೆನಾಡಿನ ಭೂಮಿಯ ಸಮಸ್ಯೆಗಳು, ವನ್ಯಜೀವಿ ಮಾನವ ಸಂಘರ್ಷ ಮುಂತಾದ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಸಂವಾದ ನಡೆಸಲು ಅವಕಾಶ ಸಿಗಲಿದೆ. ಆದ್ದರಿಂದ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕೃಷಿಕರು ಈ ಅವಕಾಶ ಬಳಸಿಕೊಳ್ಳಬೇಕು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಮಾತನಾಡಿ, 6 ಬಾರಿ ರಾಜ್ಯ ಸರ್ಕಾರ ವಾಪಸ್ ಕಳಿಸಿದ್ದ ಕಸ್ತೂರಿರಂಗನ್ ವರದಿಯನ್ನು ಮತ್ತೆ ಕೇಂದ್ರ ಸರ್ಕಾರ ಕಳಿಸಿದೆ. ಇದರ ಬಗ್ಗೆ ಸ್ಪಷ್ಟ ತೀರ್ಮಾನ ಮಾಡಲು ಸ್ವತಃ ಮುಖ್ಯಮಂತ್ರಿಗಳೇ ಮಲೆನಾಡಿಗೆ ಭೇಟಿ ಕೊಡುತಿದ್ದಾರೆ.21ರಿಂದ 23ರವರೆಗೆ ಈ ಬಗ್ಗೆ ವಿಧಾನಮಂಡಲದ ವಿಶೇಷ ಅಧಿವೇಶನ ಕೆರೆದಿದ್ದಾರೆ. ಆದ್ದರಿಂದ ಎಲ್ಲ ಸಂಘಟನೆಗಳು ಬಾಳೆಹೊನ್ನೂರಿನಲ್ಲಿ 19ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ, ಕಸ್ತೂರಿರಂಗನ್ ವರದಿ ಬಗ್ಗೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿತ್ತು. ಈಗ ಮಲೆನಾಡಿನ ಜನರ ನೆತ್ತಿ ಮೇಲೆ ಕಸ್ತೂರಿರಂಗನ್ ತೂಗುಕತ್ತಿ ತೂಗುತ್ತಿದೆ. ಹೆಬ್ರಿ, ತೀರ್ಥಹಳ್ಳಿ ಮತ್ತು ಬಾಳೆಹೊನ್ನೂರಿನಲ್ಲಿ ಜನರ ಅಹವಾಲು ಕೇಳಲು ಮುಖ್ಯಮಂತ್ರಿಯೆ ಬರುತ್ತಿದ್ದು ನಮಗೆ ನೈತಿಕ ಬೆಂಬಲ ಸಿಕ್ಕಿದಂತಿದೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಕೃಷಿಕರ ಜೊತೆಗೆ ಕಾರ್ಮಿಕರು, ವ್ಯಾಪಾರಸ್ಥರು ಮತ್ತು ಎಲ್ಲ ವರ್ಗದವರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.ಪಕ್ಷದ ಮುಖಂಡರಾದ ರಫೀಕ್, ಗಣೇಶ್ ಭಟ್ ಮತ್ತು ಸದಸ್ಯರು ಭಾಗವಹಿಸಿದ್ದರು.