ಧಾರ್ಮಿಕ ಮಂತ್ರೋಚ್ಚಾರಣೆಯ ನಡುವೆ ಕಳಸಗಳಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯಿಂದ ರಥಗಳ ಬಳಿಗೆ ಸಾಗಿಸಲಾಯಿತು.

ಕಂಪ್ಲಿ: ಪಟ್ಟಣದ ಆರಾಧ್ಯ ದೈವಗಳಾದ ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವ ನ. 30ರಂದು ಜರುಗಲಿದ್ದು, ಬುಧವಾರ ದೇವಸ್ಥಾನದಲ್ಲಿ ಕಳಸಧಾರಣ ಮತ್ತು ಕಂಕಣಧಾರಣ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಧಾರ್ಮಿಕ ಸಂಪ್ರದಾಯದಂತೆ ಬಸವಣ್ಣನ ಕಳಸವನ್ನು ₹26,511 ದಕ್ಷತಾ ಭಕ್ತಿಯಿಂದ ಪತ್ರಯ್ಯಸ್ವಾಮಿ ಅವರು ಸ್ವೀಕರಿಸಿದರೆ, ನೀಲಮ್ಮನ ಕಳಸವನ್ನು ₹23,001 ದೇಣಿಗೆಯೊಂದಿಗೆ ಮಫತ್‌ಲಾಲ್ ಸ್ವೀಕರಿಸಿದರು. ಅದೇ ರೀತಿ ಜೋಡಿಯಾದ ಬಸವಣ್ಣ–ನೀಲಮ್ಮನ ಕಂಕಣಧಾರಣೆಯನ್ನು ₹20,101 ದೇಣಿಗೆಯೊಂದಿಗೆ ವಾಲಿ ಕೊಟ್ರಪ್ಪ ಅವರು ಸೇವೆಯಾಗಿ ಪಡೆದರು. ಕಳಸ ಸ್ವೀಕಾರದ ನಂತರ ಧಾರ್ಮಿಕ ಮಂತ್ರೋಚ್ಚಾರಣೆಯ ನಡುವೆ ಕಳಸಗಳಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯಿಂದ ರಥಗಳ ಬಳಿಗೆ ಸಾಗಿಸಲಾಯಿತು. ನಂತರ ಜೋಡಿ ಕಳಸಗಳನ್ನು ರಥಗಳಲ್ಲಿ ವಿಧಿವಿಧಾನಂತೆ ಅಳವಡಿಸಲಾಯಿತು.

ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿ ಅಧ್ಯಕ್ಷ ಡಿ. ವೀರಪ್ಪ, ಧರ್ಮಕರ್ತ ಯು.ಎಂ. ವಿದ್ಯಾಶಂಕರ, ಪದಾಧಿಕಾರಿಗಳಾದ ಜೌಕೀನ್ ಸತೀಶ್, ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ, ಚಿನ್ನದಕಂತಿ ಶಿವಮೂರ್ತಿಸ್ವಾಮಿ, ಬಂಡೆಯ್ಯಸ್ವಾಮಿ, ಎಸ್. ಮಂಜುನಾಥ, ಅರವಿ ಅಮರೇಶ, ಮಣ್ಣೂರು ನವೀನ್, ನಂದಿಕೋಲು ಶಿವಪ್ರಸಾದ್, ಬಿ. ಶಿವಾನಂದ, ವಾಲಿ ಕೊಟ್ರಪ್ಪ, ಕಲ್ಗುಡಿ ವಿಶ್ವನಾಥ, ಆದಿಮನಿ ಹೊನ್ನಪ್ಪ ಸೇರಿದಂತೆ ಅನೇಕ ಸದ್ಭಕ್ತರು ಭಾಗವಹಿಸಿದ್ದರು.