ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು ಕಲೆಮನೆ ಸಭಾಂಗಣದಲ್ಲಿ ಇತ್ತೀಚೆಗೆ 57ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ ಹಮ್ಮಿಕೊಂಡಿತ್ತು, ಮುಖ್ಯ ಅತಿಥಿಯಾಗಿ ಶಾರದಾ ವಿಲಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ಸ್ವಾಮಿ, ವಿಶೇಷ ಆಹ್ವಾನಿತರಾಗಿ ನೃತ್ಯ ಗುರು ಜಮುನಾ ರಾಣಿ ಮಿರ್ಲೆ, ಎಸ್. ಧನಲಕ್ಷ್ಮೀ, ಕೆ.ಎನ್. ಸೀಮಾ, ಎನ್. ಸಿಂಧು, ಲಕ್ಷ್ಮೀ ವಿಶ್ವನಾಥನ್, ಅರ್ಚನಾ ಭಟ್ ಭಾಗವಹಿಸಿದ್ದರು.ಕಲಾ ಸುರುಚಿಯ ಬಾಲಕೃಷ್ಣ, ಪತ್ರಕರ್ತ ರಂಗನಾಥ್ ಮೈಸೂರು ಮೊದಲಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಸರಗೋಡಿನ ಹೆಸರಾಂತ ನೃತ್ಯ ಗುರು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ್ ತಮ್ಮ 20 ವಿದ್ಯಾರ್ಥಿಗಳ ತಂಡದೊಂದಿಗೆ ಮತ್ತು ಹಾಡುಗಾರಿಕೆ ಮತ್ತು ವಿವಿಧ ವಾದ್ಯಗಳ ಕಲಾವಿದರೊಂದಿಗೆ ಆಗಮಿಸಿ ಸತತವಾಗಿ ಒಂದು ಗಂಟೆ 45 ನಿಮಿಷಗಳ ಕಾಲ ಮೈ ನವಿರೇಳಿಸುವ ಮನರಂಜನೀಯ ಅದ್ಭುತ ಶಾಸ್ತ್ರೀಯ ಭರತನಾಟ್ಯ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.ನೃತ್ಯ ಕಾರ್ಯಕ್ರಮದ ಉದ್ದಕ್ಕೂ, ಗಣಪತಿ, ಪಾರ್ವತಿ, ಆಂಜನೇಯ, ರಾಮ, ಕೃಷ್ಣ, ಮತ್ತು ಅಯ್ಯಪ್ಪ ಮುಂತಾದ ದೇವತೆಗಳ ನೃತ್ಯ ಬಂಧಗಳನ್ನು ವಿನೂತನವಾಗಿ ಸಂಯೋಜಿಸಿ ಸಮೂಹ ನೃತ್ಯ ಪ್ರದರ್ಶನವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಂದ ರಂಜನೀಯವಾಗಿ ಪ್ರಸ್ತುತಪಡಿಸಿದರು.ನೃತ್ಯ ಗುರು ವಿದುಷಿ ಮಹಿಮಾ ಹರೀಶ್ ತಮ್ಮ ಇವರು ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಆಗಮಿಸಿ , ತೋಡೆಯ ಮಂಗಳ, ಮೈಸೂರು ಜತಿ ಮತ್ತು ಗಣಪತಿಯ ಕೀರ್ತನೆಯನ್ನು ಸಂಯೋಜಿಸಿದ್ದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೂರ್ಯನಾರಾಯಣ ಸ್ವಾಮಿ ಮತ್ತು ಇತರ ಅತಿಥಿಗಳು ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ಈ ನಿರಂತರ ಅಂತಾರಾಷ್ಟ್ರೀಯ ಕಲೆಮನೆ ಉತ್ಸವವನ್ನು ಶ್ಲಾಘಿಸಿದರು.