ಕನ್ನಡಕ್ಕೆ ಕಾಳಿದಾಸನ ಮೇಘದೂತ ಅನುವಾದಿಸಿದ ಮೊದಲಿಗ ಶಾಂತಕವಿಗಳು

| Published : Jan 20 2025, 01:34 AM IST

ಸಾರಾಂಶ

ಶಾಂತಕವಿಗಳು 1892ರಲ್ಲಿ ರಚಿಸಿದ ಅನುವಾದಿತ “ಮೇಘದೂತ” ಕಾವ್ಯದಲ್ಲಿ ನಲ್ಲೆಗೆ ಕಳುಹಿಸುವ ಸಂದೇಶವನ್ನು ವರ್ಣಿಸಲಾಗಿದೆ. ಜನರ ಸಂವೇದನೆ, ಸಂಸ್ಕೃತಿ, ಆಹಾರ, ವಿಚಾರಗಳು ಸೇರಿದಂತೆ ಹಲವಾರು ವಿಷಯಗಳು ಮೇಘದೂತದಲ್ಲಿವೆ.

ಧಾರವಾಡ:

ವಿರಹದ ಶಾಪವನ್ನು ಪಡೆದ ಯಕ್ಷನೊಬ್ಬನ ಕಲ್ಪನಾ ವಿಲಾಸವೇ ಕಾಳಿದಾಸನ ಮೇಘದೂತ. ಈ ಕಾವ್ಯಕ್ಕೆ ವಸ್ತು, ಕತೆ ಎಂಬುದಿಲ್ಲ. ಈ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ ಮೊದಲಿಗರು ಶಾಂತ ಕವಿಗಳು ಎಂಬುದು ಹೆಮ್ಮೆಯ ವಿಚಾರ ಎಂದು ಖ್ಯಾತ ವಿದ್ವಾಂಸ ಡಾ. ಶ್ರೀರಾಮ ಭಟ್ ಹೇಳಿದರು.ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಿದ್ದ ಕೀರ್ತನಕಾರ ಸಕ್ಕರಿ ಬಾಳಾಚಾರ್ಯ “ಶಾಂತಕವಿ” 169ನೇ ಜನ್ಮದಿನೋತ್ಸವ ಅಂಗವಾಗಿ 2025ರ ದಿನದರ್ಶಿಕೆ ಬಿಡುಗಡೆಗೊಳಿಸಿದ ಅವರು, ಶಾಂತಕವಿಗಳು 1892ರಲ್ಲಿ ರಚಿಸಿದ ಅನುವಾದಿತ “ಮೇಘದೂತ” ಕಾವ್ಯದಲ್ಲಿ ನಲ್ಲೆಗೆ ಕಳುಹಿಸುವ ಸಂದೇಶವನ್ನು ವರ್ಣಿಸಲಾಗಿದೆ. ಜನರ ಸಂವೇದನೆ, ಸಂಸ್ಕೃತಿ, ಆಹಾರ, ವಿಚಾರಗಳು ಸೇರಿದಂತೆ ಹಲವಾರು ವಿಷಯಗಳು ಮೇಘದೂತದಲ್ಲಿವೆ. ದೇಶೀಯ ಭಾಷೆಯ ಮೂಲಕ ಓದುಗರಿಗೆ ಕಾವ್ಯವನ್ನು ವರ್ಣರಂಜಿತವಾಗಿ ಸವಿಯುವಂತೆ ಬಾಳಾಚಾರ್ಯರು ಅನುವಾದಿಸಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಸಂಸ್ಕೃತದಿಂದ ರಚಿತವಾದ ಕಾವ್ಯ, ನಾಟಕ ಹಾಗೂ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಸಾಹಿತ್ಯಕ್ಕೆ ಬಾಳಾಚಾರ್ಯರು ನೀಡಿದ ವಿಚಾರಗಳು ವಿಸ್ತಾರ ಸ್ವರೂಪವನ್ನು ಪಡೆದಿವೆ. ಅವರ ಕೃತಿಗಳು, ಕಾವ್ಯಗಳು ಹಾಗೂ ನಾಟಕಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಸಕ್ಕರಿ, ಸದಸ್ಯರಾದ ಅರವಿಂದ ಕುಲಕರ್ಣಿ, ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಇದ್ದರು. ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ದಿನದರ್ಶಿಕೆ ಕುರಿತು ತಿಳಿಸಿದರು. ಅನಿತಾ ಹನುಮೇಶ ಪ್ರಾಸ್ತಾವಿಕ ಮಾತನಾಡಿದರು. ರಾಘವ ಕಮ್ಮಾರ ಹಾಗೂ ಸಂಗಡಿಗರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಭಾವನಾ ಸೌರವ ಸಕ್ಕರಿ ವಂದಿಸಿದರು.