ತಲೆಎತ್ತಿದ ಭವ್ಯ ಅಯೋಧ್ಯೆ ಮಂದಿರ, ನಭಕ್ಕೆ ನೆಗೆದ ಚಂದ್ರಯಾನ-3!

| Published : Dec 10 2023, 01:30 AM IST

ತಲೆಎತ್ತಿದ ಭವ್ಯ ಅಯೋಧ್ಯೆ ಮಂದಿರ, ನಭಕ್ಕೆ ನೆಗೆದ ಚಂದ್ರಯಾನ-3!
Share this Article
  • FB
  • TW
  • Linkdin
  • Email

ಸಾರಾಂಶ

ತಲೆಎತ್ತಿದ ಅಯೋಧ್ಯೆಯ ಭವ್ಯ ರಾಮಮಂದಿರ, ನಭಕ್ಕೆ ಹಾರಿದ ಚಂದ್ರಯಾನ ೩, ಕಲ್ಲಡ್ಕ ಕ್ರೀಡೋತ್ಸವದಲ್ಲಿ ಸಾಂಸ್ಕೃತಿಕ ಮೆರುಗು

ಕನ್ನಡಪ್ರಭ ವಾರ್ತೆ ಬಂಟ್ವಾಳ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೆ ಇನ್ನೇನು ಅಂತಿಮ ಹಂತದಲ್ಲಿ ಇದ್ದರೆ, ಇತ್ತ ವಿಶಾಲ ಮೈದಾನದಲ್ಲಿ ಮಕ್ಕಳೇ ಸೇರಿ ನಿರ್ಮಿಸಿದ ನಾಡಿನ ಮರ್ಯಾದಾ ಪುರುಷೋತ್ತಮದ ಶ್ರೀರಾಮ ದೇಗುಲದ ರಂಗು. ಇನ್ನೊಂದೆಡೆ ನೋಡು ನೋಡುತ್ತಿದ್ದಂತೆಯೇ ನಭಕ್ಕೆ ನೆಗೆದ ಚಂದ್ರಯಾನ-3..!ಇವೆಲ್ಲವೂ ಬಂಟ್ವಾಳ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್‌ನಿಂದ ಶನಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವದ ಝಲಕ್‌. ಶ್ರೀರಾಮ ವಿದ್ಯಾಕೇಂದ್ರದ ಸುಮಾರು 3,510ಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲದಲ್ಲಿ ಸುಮಾರು ಎರಡೂವರೆ ಗಂಟೆ ಕಾಲ ನಿರಂತರವಾಗಿ ಸಾಂಸ್ಕೃತಿಕ ಕ್ರೀಡಾ ಸಾಮರ್ಥ್ಯ ತೋರ್ಪಡಿಸಿದರು. ಸಂಜೆ ನಿಗದಿತ 6 ಗಂಟೆಗೆ ಸರಿಯಾಗಿ ಆರಂಭವಾದ ಕ್ರೀಡೋತ್ಸವ ರಾತ್ರಿ 8.30ರ ವರೆಗೂ ಮುಂದುವರಿಯಿತು. 20ಕ್ಕೂ ವಿವಿಧ ಬಗೆಯ ಸಾಂಸ್ಕೃತಿಕ ಪ್ರಕಾರಗಳನ್ನು ಶಾರೀರಿಕ ಕಸರತ್ತುಗಳೊಂದಿಗೆ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಎಲ್ಲ ವಿದ್ಯಾರ್ಥಿಗಳೂ ಕ್ರೀಡೋತ್ಸವದಲ್ಲಿ ಒಂದಿಲ್ಲೊಂದು ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು ವಿಶೇಷವಾದರೆ, ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಇತರರಿಗೆ ಪ್ರೇರಣೆಯಾದರು.ಆರಂಭದಲ್ಲಿ ಬ್ಯಾಂಡ್‌ ವಾದನದಲ್ಲಿ ಪಥ ಸಂಚಲನ ನಡೆಯಿತು. ಬಳಿಕ ಶಿಶು ನೃತ್ಯ, ಘೋಷ್‌ ಸಂಚಲನ, ಜಡೆ ಕೋಲಾಟ, ದೀಪಾರತಿ, ನಿಯುದ್ಧ, ವಿವಿಧ ಬಗೆಯ ಯೋಗಾಸನ, ಯೋಗ ವ್ಯಾಯಾಮ, ಕೋಲ್ಮಿಂಚು, ನೃತ್ಯ ಭಜನೆ, ಮೈನವಿರೇಳಿಸುವ ಮಲ್ಲಕಂಬ ಕಸರತ್ತು, ಟಿಕ್‌ ಟಿಕ್‌ ಪ್ರದರ್ಶನ, ನೃತ್ಯ ವೈಭವ, ಏಕಚಕ್ರ, ದ್ವಿಚಕ್ರ ಸಮತೋಲನ, ಅಪಾಯಕಾರಿ ಬೆಂಕಿ ಸಾಹಸ, ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ ನೋಡುಗರ ಮನ ಸೆಳೆಯಿತು.