ಡಿ. 22ಕ್ಕೆ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ

| Published : Dec 10 2023, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಳ್ಳಾರಿಬೆಂಗಳೂರಿನ ಗಾಂಧಿ ಭವನದಲ್ಲಿ ಡಿ. 22ರಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಜಿ. ನಾಗರತ್ನ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ಕನಿಷ್ಠ ₹ 25 ಸಾವಿರಗಳಿಗೆ ಹೆಚ್ಚಿಸಬೇಕು.

ಸುದ್ದಿಗೋಷ್ಠಿಯಲ್ಲಿ ಎಸ್‌.ಜಿ. ನಾಗರತ್ನ ಮಾಹಿತಿ ಕನ್ನಡಪ್ರಭ ವಾರ್ತೆ ಬಳ್ಳಾರಿ

ಬೆಂಗಳೂರಿನ ಗಾಂಧಿ ಭವನದಲ್ಲಿ ಡಿ. 22ರಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಜಿ. ನಾಗರತ್ನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ಕನಿಷ್ಠ ₹ 25 ಸಾವಿರಗಳಿಗೆ ಹೆಚ್ಚಿಸಬೇಕು. ಉಪನ್ಯಾಸಕರ ಮಾಸಿಕ ಗೌರವಧನ ಪ್ರತಿ ತಿಂಗಳು ಐದನೇ ತಾರೀಖಿನ ಮುಂಚೆಯೇ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅತಿಥಿ ಉಪನ್ಯಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜುಗಳ ದಾಖಲಾತಿ ಸೇರಿದಂತೆ ಕಾಲೇಜಿನ ಎಲ್ಲ ಕೆಲಸಗಳನ್ನು ಉಪನ್ಯಾಸಕರು ಮಾಡುತ್ತಿದ್ದಾರೆ.ಅತಿಥಿ ಉಪನ್ಯಾಸಕರು ಹತ್ತು ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟಾಗಿಯೂ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನ ₹12 ಸಾವಿರಗಳಿಗೆ ಮೀರಿಲ್ಲ. ಇದು ಕೂಡ ಪ್ರತಿ ತಿಂಗಳು ನೀಡುವುದಿಲ್ಲ.ಮೂರು ತಿಂಗಳಿಗೊಮ್ಮೆಯೋ, ಐದು ತಿಂಗಳಿಗೊಮ್ಮೆ ಕೈ ತಲುಪುತ್ತದೆ. ಕೆಲವು ಜಿಲ್ಲೆಗಳಲ್ಲಿ ರಜಾ ದಿನ ಪರಿಗಣಿಸಿ ವೇತನ ಕಡಿತಗೊಳಿಸಲಾಗುತ್ತಿದೆ. ಇನ್ನು ರಾಜ್ಯದ ಹಲವಾರು ಕಾಲೇಜುಗಳಲ್ಲಿ ವಾರಕ್ಕೆ ಕೇವಲ 10 ಗಂಟೆಗಳು ಮಾತ್ರ ಕಾರ್ಯಭಾರ ನೀಡಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸುತ್ತೋಲೆ ಇದ್ದರೂ ವಾರಕ್ಕೆ 20 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಎಂಬುದು ನಮ್ಮೆಲ್ಲರಿಗೂ ಮರೀಚಿಕೆಯಾಗಿದೆ. ಪ್ರತಿ ವರ್ಷವೂ ಮುಂದಿನ ವರ್ಷ ನಮಗೆ ಕೆಲಸ ಇರುತ್ತದೆ ಇಲ್ಲವೋ ಎಂಬ ಆತಂಕ ಕಾಡುತ್ತದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನೇಮಕಾತಿ ಆದೇಶದಲ್ಲಿ ಕೇವಲ ಉತ್ತಮ ಮೆರಿಟ್ ಇದ್ದವರಿಗೆ ಮಾತ್ರ ಆದ್ಯತೆ ನೀಡುವುದರಿಂದ ಪ್ರತಿ ವರ್ಷವೂ ಅನೇಕ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಮೆರಿಟ್ ನೊಂದಿಗೆ ಸೇವಾ ಅವಧಿಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಪರಿಗಣಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಗಮನಕ್ಕೆ ತರುವ ಉದ್ದೇಶದಿಂದ ಸಮಾವೇಶ ಸಂಘಟಿಸಲಾಗಿದೆ ಎಂದರು. ಸಂಘದ ಜಿಲ್ಲಾ ಸಮಿತಿ ಸದಸ್ಯ ರಂಗಣ್ಣ ಸುದ್ದಿಗೋಷ್ಠಿಯಲ್ಲಿದ್ದರು.