ಸಾರಾಂಶ
48ಕ್ಕೂ ಅಧಿಕ ಹೋಟೆಲ್‌ಗಳಲ್ಲಿ ಕಾನೂನು ಉಲ್ಲಂಘಿಸಿ ಮದ್ಯ ಮಾರಾಟಎಸ್.ಎಂ.ಸೈಯದ್
ಕನ್ನಡಪ್ರಭ ವಾರ್ತೆ ಗಜೇಂದ್ರಗಡಮದ್ಯಪಾನ ಸೇವನೆಗೆ ಅವಕಾಶವಿಲ್ಲ ಎನ್ನುವ ನಾಮಫಲಕಗಳು ಪಟ್ಟಣ ಸೇರಿ ತಾಲೂಕಿನ ಹೋಟೆಲ್ ಹಾಗೂ ದಾಬಾಗಳಲ್ಲಿ ರಾರಾಜಿಸುತ್ತಿವೆ. ಆದರೆ ಹಗಲು, ರಾತ್ರಿ ಎನ್ನದೆ ಹೋಟೆಲ್ ಗಳಲ್ಲಿ ಅಕ್ರಮವಾಗಿ ಮದ್ಯಪಾನ ಮಾರಾಟ ಹಾಗೂ ಸೇವನೆ ಎಗ್ಗಿಲ್ಲದೆ ನಡೆಯುತ್ತಿರುವುದು ಸರ್ಕಾರದ ಆದೇಶವನ್ನು ಅಣಕಿಸುವಂತಾಗಿದೆ.ಗದಗ ಜಿಲ್ಲೆಯ ವಾಣಿಜ್ಯ ನಗರಿ ಪ್ರಖ್ಯಾತಿ ಪಡೆದಿರುವ ಗಜೇಂದ್ರಗಡ ಪಟ್ಟಣದಲ್ಲಿ ಅಧಿಕೃತವಾಗಿ ೪೮ಕ್ಕೂ ಅಧಿಕ ಮಾಂಸಹಾರಿ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ೧೮ ಹೋಟೆಲ್‌ಗಳು ಮಾತ್ರ ಈ ವರ್ಷದ ಮರು ಪರವಾನಗಿ ಪಡೆದಿವೆ. ಅಂದಾಜು ೩೦ ಹೋಟೆಲ್‌ಗಳು ಮರು ಪರವಾನಗಿ ಪಡೆಯಬೇಕಾಗಿದೆ. ಆದರೆ ಬಹುತೇಕ ಹೋಟೆಲ್‌ಗಳಲ್ಲಿ ಮದ್ಯಪಾನ ನಿಷೇಧ ಕಾನೂನನ್ನು ಮುರಿದು ರಾಜಾರೋಷವಾಗಿ ಮದ್ಯಪಾನ ಮಾರಾಟ, ಸೇವನೆ ನಡೆಯುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ಗಜೇಂದ್ರಗಡ ವಾಣಿಜ್ಯ ವ್ಯವಹಾರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಹುಬ್ಬಳ್ಳಿ ಶಹರದಂತಹ ದೊಡ್ಡ ನಗರಗಳಲ್ಲಿ ಸಿಗುವ ದರಕ್ಕೆ ಗ್ರಾನೈಟ್, ಇಲೆಕ್ಟ್ರಾನಿಕ್ ಸೇರಿದಂತೆ ವಿವಿಧ ಸಾಮಗ್ರಿಗಳು ಸಿಗುತ್ತವೆ. ಹೀಗಾಗಿ ಪಟ್ಟಣಕ್ಕೆ ನೆರೆಯ ತಾಲೂಕು ಕೇಂದ್ರಗಳಾದ ಯಲಬುರ್ಗಾ, ಕುಷ್ಟಗಿ ಹಾಗೂ ಹುನಗುಂದ ತಾಲೂಕಿನ ಗ್ರಾಮಗಳ ಜನತೆ ವ್ಯಾಪಾರ ವಹಿವಾಟಿಗಾಗಿ ಆಗಮಿಸುತ್ತಾರೆ. ತಮ್ಮ ಕೆಲಸ ಕಾರ್ಯದ ಬಳಿಕ ಇಂತಹ ಹೊಟೆಲ್‌ಗೆ ತೆರಳಿ ಮದ್ಯಪಾನ ಮಾಡಿ ಊಟ ಮಾಡುತ್ತಿದ್ದಾರೆ. ಹೀಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತ ಪ್ರಕರಣಗಳು ಸಹ ನಡೆಯುತ್ತಿವೆ. ಹೋಟೆಲ್‌ಗಳಲ್ಲಿ ಅಕ್ರಮ ಮದ್ಯಪಾನ ಮಾರಾಟ ಹಾಗೂ ಸೇವನೆ ನಡೆಯುತ್ತಿದ್ದರೂ ಸಹ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
ಟೇಸ್ಟಿಂಗ್ ಪೌಡರ್ ಹಾಗೂ ಮದ್ಯಪಾನಕ್ಕೆ ಆದ್ಯತೆ:ಆಹಾರ ತಯಾರಿಕೆ ಸಂದರ್ಭದಲ್ಲಿ ಟೇಸ್ಟಿಂಗ್ ಪೌಡರ ಬಳಸದಂತೆ ಸರ್ಕಾರದ ಆದೇಶವಿದೆ. ಅಲ್ಲದೆ ಹೋಟೆಲ್ ಪರವಾನಗಿ ನೀಡುವ ವೇಳೆ ಸ್ಥಳೀಯ ಆಡಳಿತಗಳು ಸಹ ಟೇಸ್ಟಿಂಗ್ ಪೌಡರ್ ಬಳಸದಂತೆ ಹಾಗೂ ಮದ್ಯಪಾನ ಮಾರಾಟ, ಸೇವನೆ ಕಂಡು ಬಂದರೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೇಸ್ಟಿಂಗ್ ಪೌಡರ್ ಬಳಸಲಾಗುತ್ತಿದೆ. ಆದರೂ ಅಧಿಕಾರಿಗಳುಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಇದೆ.
ವಿಕೇಂಡ್ ನಲ್ಲಿ ಊರಿನ ಬಯಲು ಜಾಗೆಗಳು ಫುಲ್, ಫುಲ್:ಪಟ್ಟಣದ ಕುಷ್ಟಗಿ ರಸ್ತೆ, ಯಲಬುರ್ಗಾ ರಸ್ತೆ, ರೋಣ ಹಾಗೂ ಗದಗ ರಸ್ತೆಗಳ ಬಯಲು ಜಾಗೆಯಲ್ಲಿ ಹಾಗೂ ನಿವೇಶನ ಉದ್ದೇಶಕ್ಕಾಗಿ ನಿರ್ಮಿಸುತ್ತಿರುವ ಪ್ಲಾಟ್‌ಗಳಲ್ಲಿ ವೀಕೆಂಡ್‌ನಲ್ಲಿ ಮದ್ಯಪ್ರಿಯರು ತುಂಬಿ ತುಳುಕಾಡುತ್ತಿರುತ್ತಾರೆ. ಪರಿಣಾಮ ಬಿಯರ್ ಸೇರಿ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಹಾಳೆಗಳಿಂದ ಈ ಪ್ರದೇಶ ತುಂಬಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಕ್ಕೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಆಯಾ ಬಡಾವಣೆಯ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಪಟ್ಟಣದಲ್ಲಿ ಮಾಂಸಾಹಾರಿ ಹೊಟೇಲ್‌ಗಳಲ್ಲಿ ಮದ್ಯಪಾನ ಮಾರಾಟ ಮತ್ತು ಸೇವನೆ ಜತೆಗೆ ಟೇಸ್ಟಿಂಗ್ ಪೌಡರ ಬಳಸದಂತೆ ಸೂಚಿಸುವುದರ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಇಲ್ಲದಿದ್ದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಪುರಸಭೆ ಆರೋಗ್ಯ ವಿಭಾಗದ ರಾಘವೇಂದ್ರ ಮಂತಾ ಹೇಳಿದರು.ಗಜೇಂದ್ರಗಡ ಕೆಲವು ಹೊಟೇಲ್, ಬೇಕರಿ ಹಾಗೂ ಕಿರಾಣಿ ಅಂಗಡಿಗಳಿಗೆ ಈಗಾಗಲೇ ಭೇಟಿ ನೀಡಿ ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿ, ಕೆಲವರಿಗೆ ನೋಟಿಸ್ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೆ ಭೇಟಿ ನೀಡಿ ಪರಿಶೀಲಿಸಲಾಗುವುದು ಆಹಾರ ಸುರಕ್ಷಾತಾ ಅಧಿಕಾರಿ ಚೇತನ ಎಸ್. ಹೇಳಿದರು.