ಸಾರಾಂಶ
ಕುದೂರು: ಹೇಮಾವತಿ ನದಿ ನೀರು ಮಾಗಡಿ ತಾಲೂಕಿನ ಕೆರೆಗಳಿಗೆ ಹರಿಯಬೇಕು ಎಂಬ ಬೇಡಿಕೆ ಜನರಿಗೆ ತೋಳ ಬಂತು ತೋಳದ ಕಥೆಯಂತಾಗಿದೆಯೇ ಹೊರತು ಸದ್ಯಕ್ಕೆ ಹೇಮೆ ಮಾಗಡಿಗೆ ಬರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೇಮಾವತಿ ನದಿ ನೀರನ್ನೆ ಚುನಾವಣಾ ಅಜೆಂಡಾ ಮಾಡಿಕೊಂಡು ಗೆಲ್ಲುತ್ತಿರುವ ಜನಪ್ರತಿನಿಧಿಗಳು ಗೆದ್ದು ನಂತರ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ.
ಇದೇ ನನ್ನ ಅಂತಿಮ ಹೋರಾಟ... ಹೀಗೆಂದವರು ಮಾಗಡಿ ತಾಲೂಕಿನ ಹಾಲಿ ಶಾಸಕ ಎಚ್.ಸಿ.ಬಾಲಕೃಷ್ಣ. ಹೇಮಾವತಿ ವಿಷಯದಲ್ಲಿ ನನ್ನ ಹೋರಾಟ ಅಳಿವು ಉಳಿವಿನ ರೀತಿಯಲ್ಲಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ, 3 ಟಿಎಂಸಿ ನೀರು ರಾಮನಗರ ಜಿಲ್ಲೆಗೂ ಪಾಲು ಬೇಕು. ಅದಕ್ಕಾಗಿ ನಾನು ಹೋರಾಟ ಮಾಡುತ್ತೇನೆ ಇದು ನನ್ನ ಅಂತಿಮ ಹೋರಾಟವಾಗಿದೆ. ಹಾಗೂ ಆಗಿನ ಶಾಸಕರಾಗಿದ್ದ ಎ.ಮಂಜುನಾಥ್ ಅವರನ್ನು ನಿಮಗೆ ಇಚ್ಚಾಶಕ್ತಿ ಇಲ್ಲ, ಪಕ್ಕದ ಕುಣಿಗಲ್ಲಿನ ಶಾಸಕರಾದ ರಂಗನಾಥ್ ಪ್ರತಿಭಟನೆ ಮಾಡಿದಂತೆ ಪ್ರತಿಭಟನೆ ಮಾಡಲು ನಿಮಗೆ ಆಗುತ್ತಿಲ್ಲ ಎಂದು ಟೀಕಿಸಿದ್ದರು.ಎರಡು ವರ್ಷದಲ್ಲಿ ಹೇಮೆ ಮಾಗಡಿಗೆ:ಎಚ್.ಸಿ.ಬಾಲಕೃಷ್ಣರ ಮಾತಿಗೆ ಆಗಿನ ಶಾಸಕರಾಗಿದ್ದ ಎ.ಮಂಜುನಾಥ್ 2021ರಲ್ಲಿ ಇನ್ನೆರೆಡು ವರ್ಷಗಳಲ್ಲಿ ಮಾಗಡಿಯ ಕೆರೆಗಳಿಗೆ ಹೇಮಾವತಿ ಹರಿಯುತ್ತಾಳೆ. ಡಿಪಿಆರ್ ಸಿದ್ದವಾಗಲು 43 ಲಕ್ಷ ಹಣ ಖರ್ಚಾಯಿತು. ಕುಣಿಗಲ್‌ನ 11 ಕೆರೆಗಳು, ಮಾಗಡಿಯ 83 ಕೆರೆಗಳಿಗೆ ನೀರು ತುಂಬಿಸಬೇಕು. ಇದಕ್ಕೆ ಹೆಚ್ಚುವರಿಯಾಗಿ 270 ಕೋಟಿ ಹಣ ಮಂಜೂರಾಗಿದೆ. ಇನ್ನೆರೆಡು ವರ್ಷಗಳಲ್ಲಿ ನೀರು ಖಂಡಿತಾ ಹರಿಯುತ್ತದೆ ಎಂದು ಜನರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಹೇಮೆ ಹರಿಯಲೇ ಇಲ್ಲ. ಹರಿಯುವ ಸೂಚನೆಯನ್ನೂ ಕೊಡುತ್ತಿಲ್ಲ. ಹಾಗಾದರೆ ನಾವು ಯಾರನ್ನು ನಂಬಿ ಮತ ಹಾಕುವುದು? ಎಂಬುದು ಇಲ್ಲಿನ ರೈತರ ಪ್ರಶ್ನೆ.
ಬಾಲಕೃಷ್ಣರ ಮಾತಿಗೆ ಕೋಪಗೊಂಡ ಜನ:ಚುನಾವಣೆಯ ಮುಂಚೆ ಹೋದಲ್ಲಿ ಬಂದಲ್ಲಿ ಹೇಮಾವತಿ ಹರಿಸುತ್ತೇನೆ ಎನ್ನುತ್ತಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ, ಕಳೆದ ತಿಂಗಳು ಸಂಸದ ಡಿ.ಕೆ.ಸುರೇಶ್ ರವರ ಜೊತೆ ಜನಸಂಪರ್ಕ ಸಭೆ ನಡೆಸುವ ಸಂದರ್ಭದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸದೇ ಹೋದರೆ ಮಾಗಡಿ ತಾಲೂಕಿಗೆ ಹೇಮಾವತಿ ಮರೀಚಿಕೆಯಾಗುತ್ತದೆ ಎಂದು ಹೇಳಿ ಜನರಲ್ಲಿ ಗಾಬರಿ ಮೂಡಿಸಿದ್ದರು. ಶಾಸಕರಾಗುವ ಮುನ್ನ ಹೇಮಾವತಿ ನದಿ ನೀರಿನಾಗಿ ನಾನು ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟ ಮಾಡುತ್ತೇನೆ ಎಂದು ಈಗ ಡಿ.ಕೆ.ಸುರೇಶ್ ಗೆದ್ದರೆ ಮಾತ್ರ ಹೇಮಾವತಿ ನದಿ ನೀರು ಹರಿಯುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಮಾತುಗಳನ್ನಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೇಮೆ ನಿಜವಾಗಿಯೂ ತಾಲೂಕಿಗೆ ಹರಿಯತ್ತಾ?:ಕುಣಿಗಲ್ ಹೆಬ್ಬೂರು ನಡುವೆ ಹೇಮಾವತಿ ಎಡದಂಡೆ ನಾಲೆಯ 280-200 ಕಿ.ಮೀ. ನ ಅಂತರದಲ್ಲಿ ಒಂದು ಏತ ನೀರಾವರಿಯನ್ನು ರೂಪಿಸಿ ಮಾಗಡಿ ತಾಲೂಕಿಗೆ ಕುಡಿಯವ ನೀರಿಗಾಗಿ ಸರ್ಕಾರಕ್ಕೆ 1996ರಲ್ಲಿ ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿತ್ತು. ಈ ಸಮಿತಿಯಲ್ಲಿ ಮಾಗಡಿಯ ಎಚ್.ಎಂ.ರೇವಣ್ಣ, ಟಿ.ಎ.ರಂಗಯ್ಯ ಮತ್ತು ಎಚ್.ಸಿ.ಬಾಲಕೃಷ್ಣ ಸಮಿತಿಯ ಸದಸ್ಯರಾಗಿದ್ದರು. ಮಾಗಡಿ ತಾಲೂಕಿನಲ್ಲಿ ಬರುವ ಕೆರೆಗಳಿಗೆ 103 ಕ್ಯುಸೆಕ್ಸ್ ನೀರನ್ನು ಹೇಮಾವತಿ ನದಿಯಿಂದ ಹರಿಸಬೇಕು. ತುಮಕೂರು ನಾಲಾ ಶಾಖೆಯ ಕಿಮೀ 90 ರಿಂದ 120 ಮೀಗಳ ಎತ್ತರಕ್ಕೆ ಲಿಫ್ಟ್ ಮಾಡಿಕೊಡುವ ಯೋಜನೆಯನ್ನು ಸಿದ್ದಪಡಿಸಿ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಪಡೆದು ಈ ಯೋಜನೆಗೆ ಶ್ರೀರಂಗ ಏತ ನೀರಾವರಿ ಯೋಜನೆಯೆಂದು ಹೆಸರಿಡಲಾಯಿತು.
ಅಲ್ಲಿಂದ ಇಲ್ಲಿಯವರೆಗೂ ಇದರ ಕುರಿತಾಗಿ ಚುನಾವಣಾ ಹೇಳಿಕೆಗಳಾಯಿತೇ ಹೊರತು ಕೆಲಸಗಳಾಗಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕುಣಿಗಲ್ಲಿನಿಂದ ಪೈಪ್ ಕಾಮಗಾರಿಗಳು ಆರಂಭವಾಗಿ ಭರವಸೆ ಮೂಡಿಸಿತ್ತು. ಆದರೆ ಆ ಕೆಲಸವೂ ಕೂಡಾ ಅರ್ಧಕ್ಕೆ ನಿಂತು ಪೈಪುಗಳು ತುಕ್ಕು ಹಿಡಿಯಲಾರಂಭಿಸಿದ ನಂತರ ಜನರು ಇದ್ದ ಒಂದು ಆಸೆಯನ್ನು ಬಿಟ್ಟರು.180 ದಿನಗಳ ಕಾಲ ಹೇಮೆ ಹರಿಯಬೇಕಿತ್ತು:
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಮ್ಮ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇದ್ದಿದ್ದರೆ ಮಳೆಗಾಲದಲ್ಲಿ ನಿರಂತರ 180 ದಿನಗಳ ಕಾಲ ಹೇಮಾವತಿ ಮಾಗಡಿ ತಾಲೂಕಿನ ಕೆರೆಗಳಿಗೆ ಹರಿಯಬೇಕಿತ್ತು. ಇದಕ್ಕಾಗಿ ಹೆಚ್ಚುವರಿಯಾಗಿ 175 ಕೋಟಿ ರು. ಹಣವನ್ನು ಮಂಜೂರು ಮಾಡಲಾಗಿತ್ತು. ಬದಲಾದ ರಾಜಕೀಯದಲ್ಲಿ 167 ಕ್ಯುಸೆಕ್ ನೀರು ಮಾಗಡಿ ತಾಲೂಕಿಗೆ ಹರಿಯಬೇಕೆಂದು ತೀರ್ಮಾನವಾಗಿ 240 ಕಿಮೀ ನೀರು ಹರಿಯಬೇಕಿತ್ತು. ಆದರೆ ಇದುವರೆಗೂ 170 ಕಿ.ಮೀ.ನಷ್ಟು ನೀರು ಹರಿದಿದೆ. ಬಾಕಿ 70 ಕಿಮೀ ನೀರು ಹರಿದು ಬಂದರೆ ಮಾತ್ರ ಹೇಮೆ ಮಾಗಡಿಗೆ ಬರುತ್ತಾಳೆ. ತುಮಕೂರಿನ ಮಾಧುಸ್ವಾಮಿ, ಸುರೇಶ್‌ಗೌಡ ಇವರುಗಳು ಮಾಗಡಿ ತಾಲೂಕಿಗೆ ನೀರು ಹರಿಯಲು ಅವಕಾಶ ಕೊಡುವುದಿಲ್ಲ ಎಂಬ ಹೇಳಿಕೆ ಕೊಡುತ್ತಿದ್ದಾರೆ.ಅಧಿವೇಶನದಲ್ಲಿ ಗಮನ ಸೆಳೆಯಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಮಾಗಡಿ ತಾಲೂಕಿಗೆ ಹೇಮಾವತಿ ನದಿ ನೀರು ಹರಿಯಬೇಕು ಎಂಬ ಮಾತುಗಳನ್ನಾಡಿದ್ದರು. ಇದನ್ನು ಮುಂದೆ ಮಾಡಿಕೊಂಡು ಶಾಸಕ ಎಚ್.ಸಿ.ಬಾಲಕೃಷ್ಣರವರು ತಾಲೂಕಿನ ರೈತರ ಹಿತದೃಷ್ಟಿಯಿಂದ ನೀವೇ ಮಾತಾಡಿದಂತೆ ಇದು ನನ್ನ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳಿ ತಾಲೂಕಿಗೆ ನೀರನ್ನು ಹರಿಸುವ ಕೆಲಸಕ್ಕೆ ಸುಗಮ ಮಾರ್ಗ ಮಾಡಿಕೊಡಲು ಮತ್ತು ವಿಧಾನಮಂಡಲದ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದು ತಾಲೂಕಿನ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಜನರು ಮನವಿ ಮಾಡಿದ್ದಾರೆ.ಕೋಟ್ ........ಇಚ್ಚಾಶಕ್ತಿ ಪ್ರದರ್ಶಿಸಲಿ
ನಾನು ಶಾಸಕನಾಗಿದ್ದಾಗ ನನ್ನ ಪಕ್ಷದ ಸರ್ಕಾರ ಇರಲಿಲ್ಲ. ಈಗ ನಿಮ್ಮದೇ ಸರ್ಕಾರ ಇದೆ. ಈಗ ತಾವು ಇಚ್ಚಾಶಕ್ತಿ ಪ್ರದರ್ಶನ ಮಾಡಿ. ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ. ಇದು ಕೆರೆಗಳಿಗೆ ನೀರು ತುಂಬಿ ಅಂತರ್ಜಲದ ಮಟ್ಟ ಹೆಚ್ಚಾಗಲು ಸಹಾಯ ಮಾಡುತ್ತದೆ. ಆದರೆ ತಾವು ರೈತರ ಹೊಲಗದ್ದೆಗಳಿಗೆ ನೀರು ಹರಿಸುತ್ತೇವೆ ಎಂಬಂತೆ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ. ನೀರು ತಾಲೂಕಿನ ಕೆರೆಗಳಿಗೆ ಹರಿಯುವ ವಿಷಯದಲ್ಲಿ ನಾವು ಕೂಡ ನಿಮಗೆ ಬೆಂಬಲ ನೀಡುತ್ತೇವೆ.-ಎ.ಮಂಜುನಾಥ್ , ಮಾಜಿ ಶಾಸಕರು, ಮಾಗಡಿ ಕ್ಷೇತ್ರಕೋಟ್ ....
ಹೇಮಾವತಿ ನದಿ ನೀರು ಮಾಗಡಿ ತಾಲೂಕಿಗೆ ಅವಶ್ಯಕತೆ ಇದೆ. ಸಂಸದ ಡಿ.ಕೆ.ಸುರೇಶ್ ರವರು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸದಿದ್ದರೆ ಹೇಮೆ ಮರೀಚಿಕೆಯಾಗಲಿದೆ. ಆದ್ದರಿಂದ ಚುನಾವಣೆಯಲ್ಲಿ ಸುರೇಶ್ ಅವರನ್ನು ಬೆಂಬಲಿಸುವ ತೀರ್ಮಾನ ಮಾಡಬೇಕು.- ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ (ಭಾಷಣದಲ್ಲಿ ಹೇಳಿದ್ದು)9ಕೆಆರ್ ಎಂಎನ್ 1,2.ಜೆಪಿಜಿ
1.ಹೇಮಾವತಿ ಜಲಾಶಯ2.ಬಾಲಕೃಷ್ಣ
3.ಎ.ಮಂಜುನಾಥ್-------------------------