ಸಾರಾಂಶ
ಬ್ಯಾಡಗಿ: ಗ್ರಾಪಂ ವಂತಿಕೆ ಹಣದಿಂದ ಬರ ನಿರ್ವಹಣೆ ಮಾಡಬೇಕು. ನೀರಿನ ಸಮಸ್ಯೆ ಉದ್ಭವಿಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು, ನಿರ್ಲಕ್ಷ್ಯ ಮಾಡಬಾರದು ಎಂದು ಶಾಸಕ ಬಸವರಾಜ ಶಿವಣ್ಣನವರ ಸೂಚಿಸಿದರು.
ಪಟ್ಟಣದ ತಾಪಂ ಸುವರ್ಣ ಸೌಧದಲ್ಲಿ ಶನಿವಾರ ಜರುಗಿದ ಬರಗಾಲದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ವಂತಿಕೆ ಹಣವನ್ನು ಪಡೆಯಲು ಅಭಿಯಂತರ ಇಲಾಖೆಗೆ ಗ್ರಾಪಂ ಠರಾವು ಮಾಡಿಕೊಟ್ಟು ನಿಮ್ಮ ವಂತಿಕೆ ಹಣವನ್ನು ಪಡೆದುಕೊಂಡು ಕುಡಿಯುವ ನೀರನ ಕಾರ್ಯಕ್ಕೆ ಬಳಸಿಕೊಳ್ಳಿ. ಅವಶ್ಯವಿದ್ದಲ್ಲಿ, ೧೫ನೇ ಹಣಕಾಸಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿಕೊಳ್ಳಿ. ಬರಗಾಲದ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿ, ಸರ್ಕಾರ ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದೆ ಎಂದರು.ಕೇವಲ ಸರ್ಕಾರದ ಹಾಗೂ ಶಾಸಕರ ಕೆಲಸ ಮಾತ್ರವಲ್ಲ, ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸದೇ ಸರ್ವ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಪಿಡಿಒಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಒಟ್ಟಾಗಿ ಅನ್ಯೋನ್ಯತೆಯಿಂದ ಕೂಡಿಕೊಂಡು ಎಲ್ಲರೂ ಕೈಜೋಡಿಸಿ ಮಳೆಗಾಲ ಬರುವ ವರೆಗೆ ನೀರಿನ ಸಮಸ್ಯೆ ಬಾರದಂತೆ ಬರಗಾಲವನ್ನು ಎದುರಿಸೋಣ. ಜನರಿಗೆ ಅನೂಕೂಲವಾಗುವಂತ ಕೆಲಸಗಳಿದ್ದಲ್ಲಿ ೨೪ ಗಂಟೆಗಳ ಕಾಲ ನಾವು ನೀವು ಕೂಡಿಕೊಂಡು ಸೇವಾಮನೋಭಾವ ಇಟ್ಟುಕೊಂಡು ನಮ್ಮ ಮನೆಯ ಕೆಲಸವೆಂದು ಜನಸೇವೆ ಮಾಡುವಂತೆ ಸೂಚಿಸಿದರು.
ತೀವ್ರ ನೀರಿನ ಸಮಸ್ಯೆ ಇದ್ದಲ್ಲಿ ರೈತರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದುಕೊಂಡು ನೀರು ಪೂರೈಕೆ ಮಾಡಿ. ಆಗದೆ ಇದ್ದರೆ ಟ್ಯಾಂಕರ್ ಮೂಲಕ ಪೂರೈಸಬೇಕು. ಕೊಳವೆ ಬಾವಿ ಕೊರೆಯುವುದರಿಂದ ಪ್ರಯೋಜನವಿಲ್ಲ. ಮಳೆ ಇಲ್ಲದ ಕಾರಣ ಭೂಮಿಯ ಆಳದಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ನೀರು ಪೋಲಾಗದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.ಜೆಜೆಎಂನಿಂದ ಸರಿಯಾಗಿ ನೀರು ಬರುತ್ತಿಲ್ಲ, ಅರ್ಧ ಗಂಟೆಗೊಂದು ಕೊಡ ತುಂಬುತ್ತದೆ. ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ. ಎಲ್ಲೆಂದರಲ್ಲಿ ರಸ್ತೆ ಒಡೆದಿರುವುದರಿಂದ ಜನರಿಗೆ ಒಡಾಡುವುದು ತೀವ್ರ ತೊಂದರೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷರು ಶಾಸಕರೆದುರು ತಮ್ಮ ಅಳಲು ತೋಡಿಕೊಂಡರು.
ಅಭಿಯಂತರನ್ನು ನಂಬದೇ ಅಭಿವೃದ್ಧಿ ಅಧಿಕಾರಿಗಳು ಆರ್‌ಒ ಪ್ಲಾಂಟ್ (ಶುದ್ಧ ಕುಡಿಯುವ ನೀರಿನ ಘಟಕ)ಗಳನ್ನು ದುರಸ್ತಿ ಮಾಡಲು ಕ್ರಮಕೈಗೊಳ್ಳಿ. ಟೆಂಡರ್ ಕಾರ್ಯ ನಿರ್ವಹಣೆ ಮುಗಿದ ಗ್ರಾಪಂ ನೀರಿನ ಘಟಕದ ನಿರ್ವಹಣೆ ಕಾರ್ಯವನ್ನು ಗ್ರಾಪಂ ವ್ಯಾಪ್ತಿಗೆ ಪಡೆದುಕೊಳ್ಳಲು ಸಿಇಒ ಆದೇಶ ಹೊರಡಿಸಿದ್ದಾರೆ. ನಿಮ್ಮ ಗ್ರಾಪಂ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗ್ರಾಪಂನವರೇ ನಿರ್ವಹಣೆ ಮಾಡಿಕೊಂಡು ಜನರಿಗೆ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.ಸಭೆಗೆ ಗೈರಾದ ಪಿಡಿಒಗಳಿಗೆ ನೊಟೀಸ್ ನೀಡುವಂತೆ ತಾಪಂ ಇಒ ಅವರಿಗೆ ಆದೇಶಿಸಿದರು.
ಮನಬಂದಂತೆ ರಸ್ತೆ ಒಡೆಯಬೇಡಿ: ಕುಡಿಯುವ ನೀರಿನ ಪೈಪ್‌ಲೈನ್ ಹಾಕುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಎಲ್ಲೆಂದರಲ್ಲಿ ರಸ್ತೆ ಕೀಳುವಂತಿಲ್ಲ. ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿ ಅದಕ್ಕೆ ತಗಲುವ ವೆಚ್ಚವನ್ನು ಭರಿಸಿ ರಸ್ತೆಯನ್ನು ಕಿತ್ತು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು. ಜೆಜೆಎಂ ಕಾಮಗಾರಿ ಮುಗಿಯದ ಗ್ರಾಮಗಳಲ್ಲಿ ಶೀಘ್ರದಲ್ಲೇ ಮುಕ್ತಾಯಗೊಳಿಸಿ. ಗ್ರಾಮದಲ್ಲಿ ಒಡೆದಿರುವ ರಸ್ತೆಯನ್ನು ಸರಿಪಡಿಸಿ ಜನರಿಗೆ ತೊಂದರೆಯಾಗದಂತೆ ಜೆಜೆಎಂ ಕಾಮಗಾರಿ ಮುಕ್ತಾಯಗೊಳಿಸಿ. ಅಭಿಯಂತರರು ಹೆಚ್ಚು ಮುತುವರ್ಜಿ ವಹಿಸಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು.ತಾಪಂ ಇಒ ಎಂ. ಮಲ್ಲಿಕಾರ್ಜುನ, ಸುಮಲತಾ, ತಹಸೀಲ್ದಾರ್ ಫಿರೋಜ್‌ಶಾ ಸೋಮನಕಟ್ಟಿ, ಜಿಪಂ ಎಇಇ ಸುರೇಶ ಬೇಡರ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಪಿಡಿಒಗಳು, ತಾಲೂಕುಮಟ್ಟದ ಅಧಿಕಾರಿಗಳು, ಶಾಸಕರ ಆಪ್ತ ಸಹಾಯಕ ಪೀರ್‌ಸಾಬ್ ನದಾಫ್, ಬಸವರಾಜ ಇನ್ನಿತರರು ಇದ್ದರು.ಎಚ್೯-ಬ್ಯಾಡಗಿ೧-ಬ್ಯಾಡಗಿ ಪಟ್ಟಣದ ತಾಲೂಕು ಪಂಚಾಯಿತಿ ಸುವರ್ಣ ಸೌಧದಲ್ಲಿ ಶನಿವಾರ ಜರುಗಿದ ಬರಗಾಲದ ವಿಶೇಷ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.