ನೀರಿಲ್ಲದೇ ಒಣಗುತ್ತಿರುವ ರಸ್ತೆ ಬದಿ ಸಸಿ

| Published : Dec 10 2023, 01:30 AM IST

ಸಾರಾಂಶ

ಗಿಡ ಬೆಳೆಸಿ, ಪರಿಸರ ಉಳಿಸಿ ಎಂಬ ಘೋಷಣೆಯು ಘೋಷಣೆಯಾಗಿಯೇ ಉಳಿದಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಸಿಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕದ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ತಾಲೂಕಿನ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಕಳೆದ ಒಂದು ತಿಂಗಳ ಹಿಂದಷ್ಟೇ ಸಾವಿರಾರು ಸಸಿಗಳನ್ನು ಸಾಮಾಜಿಕ ಅರಣ್ಯ ವಲಯದಿಂದ ನೆಟ್ಟು ಕೈ ತೊಳೆದುಕೊಂಡಿದೆ. ಅವುಗಳ ರಕ್ಷಣೆಗೆ ಬರುತ್ತಿಲ್ಲ. ನೆಟ್ಟಿರುವ ಗಿಡಗಳು ಒಣಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಲಕಾಲಕ್ಕೆ ನೀರು ಹಾಕಿ ಸಸಿಗಳ ಪಾಲನೆ ಪೋಷಣೆ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದ ಅಂಬೋಣ.

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಗಿಡ ಬೆಳೆಸಿ, ಪರಿಸರ ಉಳಿಸಿ ಎಂಬ ಘೋಷಣೆಯು ಘೋಷಣೆಯಾಗಿಯೇ ಉಳಿದಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಸಿಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕದ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ತಾಲೂಕಿನ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಕಳೆದ ಒಂದು ತಿಂಗಳ ಹಿಂದಷ್ಟೇ ಸಾವಿರಾರು ಸಸಿಗಳನ್ನು ಸಾಮಾಜಿಕ ಅರಣ್ಯ ವಲಯದಿಂದ ನೆಟ್ಟು ಕೈ ತೊಳೆದುಕೊಂಡಿದೆ. ಅವುಗಳ ರಕ್ಷಣೆಗೆ ಬರುತ್ತಿಲ್ಲ. ನೆಟ್ಟಿರುವ ಗಿಡಗಳು ಒಣಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಲಕಾಲಕ್ಕೆ ನೀರು ಹಾಕಿ ಸಸಿಗಳ ಪಾಲನೆ ಪೋಷಣೆ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದ ಅಂಬೋಣ.

ನರೇಗಾ ಯೋಜನೆಯಲ್ಲಿ ತಾಲೂಕಿನ ಬಿಜಕಲ್ಲದಿಂದ ಕುಷ್ಟಗಿ ಪಟ್ಟಣದವರೆಗೆ 900 ಸಸಿಗಳು, ಕೇಸೂರು ಗ್ರಾಮದಿಂದ ಕಕ್ಕಿಹಾಳ ಕ್ರಾಸ್‌ವರೆಗೆ 900 ಸಸಿಗಳು, ಕಕ್ಕಿಹಾಳ ಕ್ರಾಸ್‌ನಿಂದ ಗೋತಗಿ ಗ್ರಾಮದವರೆಗೆ 900 ಸಸಿಗಳು ಈ ಮೂರು ಗ್ರಾಮಗಳ ನಡುವೆ 2700 ಸಸಿಗಳನ್ನು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನೆಡಲಾಗಿದೆ.

ಕಪ್ಪುಬಣ್ಣಕ್ಕೆ ತಿರುಗುತ್ತಿವೆ:

ಕಳೆದ ಒಂದು ತಿಂಗಳ ಹಿಂದೆ ನೆಟ್ಟ ಸಸಿಗಳಿಗೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ನೀರು ಹಾಕಿಲ್ಲ. ಇದರಿಂದ ಸಸಿಗಳು ಒಣಗಿ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತಾ ಉದುರುತ್ತಿವೆ. ಮಳೆಗಾಲದಲ್ಲಿ ಸಸಿಗಳನ್ನು ನೆಡಬೇಕಾಗಿತ್ತು. ಆದರೆ ಇಂತಹ ರಣ ಬಿಸಿಲಿನಲ್ಲಿ ಸಸಿ ನೆಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಿರುವ ಸಸಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಟ್ಯಾಂಕರ್ ಮೂಲಕ ನೀರು ಹಾಕಬೇಕು ಎಂಬ ಆದೇಶ ಇದ್ದರೂ ಅಧಿಕಾರಿಗಳು ಮಾತ್ರ ಸಸಿಗಳಿಗೆ ಬೇಕಾಗುವಷ್ಟು ನೀರು ಹಾಕುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಒಪ್ಪದ ಗ್ರಾಪಂಗಳು: ತಾಲೂಕಿನ ಕೆಲವು ಗ್ರಾಪಂ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ಕ್ರಿಯಾ ಯೋಜನೆ ರಚಿಸುವಾಗ ಅರಣ್ಯ ಇಲಾಖೆಯ ಕೆಲಸಗಳಿಗೆ ಕ್ರಿಯಾ ಯೋಜನೆ ಮಾಡಿಕೊಡಲಿಲ್ಲ. ಹಾಗಾಗಿ ಮಳೆಗಾಲದಲ್ಲಿ ಸಸಿಗಳನ್ನು ನೆಡಲಾಗದ ಕಾರಣ ಈಗ ನೆಡಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿ.ಕುಷ್ಟಗಿ ತಾಲೂಕಿನಲ್ಲಿ ಸುಮಾರು 14 ರಸ್ತೆಗಳ ಪಕ್ಕದಲ್ಲಿ ಸಸಿಗಳನ್ನು ನೆಡಲಾಗಿದೆ. ಕೆಲವೆಡೆ ಸಸಿಗಳು ನೀರಿಲ್ಲದೇ ಒಣಗಿರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಇನ್ನೊಮ್ಮೆ ಸಸಿಗಳಿಗೆ ನೀರು ಹಾಕಿಸುತ್ತೇನೆ. -ಸತೀಶ ಲುಕ್, ಸಾಮಾಜಿಕ ವಲಯ ಅರಣ್ಯಾಧಿಕಾರಿ.