ಸಾರಾಂಶ
ಸಂಸದೆ ಮೊಹುವಾ ಮೊಯಿತ್ರಾ ಅವರು ಸಂಸದೆ ಎನ್ನುವ ಪದಕ್ಕೆ ಕಳಂಕ ತಂದಿದ್ದಾರೆ. ಆದ್ದರಿಂದ ಸದನ ಸಮಿತಿ ನೀಡಿದ ವರದಿಯಂತೆ ಅವರಿಗೆ ಉಚ್ಛಾಟನೆಯ ಶಿಕ್ಷೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಸಂಸದೆ ಮೊಹುವಾ ಮೊಯಿತ್ರಾ ಅವರು ಸಂಸದೆ ಎನ್ನುವ ಪದಕ್ಕೆ ಕಳಂಕ ತಂದಿದ್ದಾರೆ. ಆದ್ದರಿಂದ ಸದನ ಸಮಿತಿ ನೀಡಿದ ವರದಿಯಂತೆ ಅವರಿಗೆ ಉಚ್ಛಾಟನೆಯ ಶಿಕ್ಷೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆ ನಮ್ಮ ಜೊತೆಗೆ ಸಂಸದೆಯಾಗಿದ್ದವರು, ಆದರೆ ಅವರು ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ, ಮಾತನಾಡುವುದಕ್ಕೂ ಹಣ ತೆಗೆದುಕೊಂಡು ಭ್ರಷ್ಟಾಚಾರ ಮಾಡಿದ್ದಾರೆ, ಇದು ಪ್ರಜಾತಂತ್ರ ವ್ಯವಸ್ಥೆಗೆ ಒಂದು ಕಪ್ಪುಚುಕ್ಕೆ. ಪವಿತ್ರವಾದ ಸಂಸತ್ ಸದನವನ್ನು, ತಮ್ಮ ಸ್ಥಾನವನ್ನು ಸ್ವಂತ ಲಾಭಕ್ಕಾಗಿ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಸದರು ಕೇಳುವ ಪ್ರಶ್ನೆಗಳನ್ನು ಗುಪ್ತವಾಗಿ ಇಡಬೇಕು, ಅವುಗಳ ಬಗ್ಗೆ ಸಂಸತ್‌ನೊಳಗೆ ಬರುವ ತನಕ ಉತ್ತರ ಯಾರಿಗೂ ಗೊತ್ತಾಗುವುದಿಲ್ಲ, ಸಂಸದರ ಒಂದು ಪ್ರಶ್ನೆಗೆ ಉತ್ತರ ಸಂಗ್ರಹಿಸಲು ಅಧಿಕಾರಿಗಳ ತಂಡವೇ 15- 20 ದಿನ ಶ್ರಮಪಡುತ್ತದೆ. ಆದರೆ ಮೊಯಿತ್ರಾ ಅವರು ಪ್ರಶ್ನೆ ಕೇಳುವುದಕ್ಕೂ ಹಣ ಪಡೆದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದಂತಹ ಕೆಟ್ಟ ಸಂದೇಶ ನೀಡಿದ್ದಾರೆ. ಇದು ಮುಂದೆ ವಿಧಾನಸಭೆಗಳಲ್ಲೂ ಹೀಗೆ ಆಗಬಹುದು. ಆದ್ದರಿಂದ ಲೋಕಸಭೆಯ ಪಾವಿತ್ರ್ಯತೆ ಕಡೆಗಣಿಸಿದ್ದಕ್ಕೆ ಮೊಯಿತ್ರಾ ಅವರಿಗೆ ಶಿಕ್ಷೆ ಆಗಬೇಕು ಎಂದು ಶೋಭಾ ಹೇಳಿದರು.ಗೂಳಿಹಟ್ಟಿಗೆ ಮಾಹಿತಿ ಇಲ್ಲ: ಆರ್.ಎಸ್.ಎಸ್.ನಲ್ಲಿ ದಲಿತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಹೇಳಿಕೆಗೆ, ಅವರು ಆರ್.ಎಸ್.ಎಸ್.ಗೆ ಯಾವಾಗ ಬಂದಿದ್ದರು ಎಂದು ಶೋಭಾ ಖಾರವಾಗಿ ಪ್ರಶ್ನಿಸಿದರು. ಗೂಳಿಹಟ್ಟಿ ಬಿಜೆಪಿಯ ಸದಸ್ಯರಾಗಿದ್ದರು, ಮಂತ್ರಿಯೂ ಆಗಿದ್ದರು, ಆದರೆ ಆರ್.ಎಸ್.ಎಸ್. ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ ಇರಬೇಕು, ಭಾರತದ ಅಭ್ಯುದಯಕ್ಕೆ ಇದುವೇ ಮಾರ್ಗ ಅನ್ನೋದು ಆರ್.ಎಸ್.ಎಸ್.ನ ಆಶಯ. ಆದ್ದರಿಂದ ಗೂಳಿಹಟ್ಟಿ ಅವರಿಗೆ ತಪ್ಪು ಮಾಹಿತಿ ಇದೆ, ಅವರು ಆರ್.ಎಸ್.ಎಸ್.ಗೆ ಬರಲಿ, ಸರಿಯಾದ ಮಾಹಿತಿ ಪಡೆದುಕೊಳ್ಳಲಿ ಎಂದರು.