ಸಾರಾಂಶ
ರಾಜ್ಯದಲ್ಲಿ ವಕೀಲರ ಮೇಲೆ ದೌರ್ಜನ್ಯ ಹಾಗೂ ಕಲಬುರಗಿ ಜಿಲ್ಲಾ ವಕೀಲರ ಸಂಘದ ಸದಸ್ಯ ವೀರನಗೌಡ ಪಾಟೀಲ ಅವರ ಹತ್ಯೆ ಖಂಡಿಸಿ ನಗರದಲ್ಲಿ ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ವಕೀಲರ ಮೇಲೆ ದೌರ್ಜನ್ಯ ಹಾಗೂ ಕಲಬುರಗಿ ಜಿಲ್ಲಾ ವಕೀಲರ ಸಂಘದ ಸದಸ್ಯ ವೀರನಗೌಡ ಪಾಟೀಲ ಅವರ ಹತ್ಯೆ ಖಂಡಿಸಿ ನಗರದಲ್ಲಿ ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಶುಕ್ರವಾರ ಹೊಸೂರು ಕೋರ್ಟ್‌ನಲ್ಲಿ ಸಮಾವೇಶಗೊಂಡ ವಕೀಲರು ವಿದ್ಯಾನಗರ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದ ಮುಖ್ಯ ರಸ್ತೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಎರಡೂ ಬದಿ ವಾಹನಗಳ ಸಂಚಾರ ತಡೆದು, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ, ಧರಣಿ ನಡೆಸಿದರು.
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಕೀಲರ ಸುರಕ್ಷತೆಗೆ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಹಲವು ವರ್ಷದಿಂದ ಬೇಡಿಕೆ ಇದೆ. ಆದ್ದರಿಂದ ಬೆಳಗಾವಿ ಅಧಿವೇಶನ ನಡೆಯುತ್ತಿದ್ದು, ಅಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ವಾರದ ಹಿಂದಷ್ಟೇ ಚಿಕ್ಕಮಗಳೂರಿನ ವಕೀಲರ ಸಂಘದ ಸದಸ್ಯ ಪ್ರೀತಮ್ ಅವರ ಮೇಲೆ ಹಲ್ಲೆ ನಡೆದಿತ್ತು. ಇದೀಗ ಕಲಬುರಗಿಯ ವಕೀಲ ವೀರನಗೌಡ ಪಾಟೀಲರ ಕೊಲೆಯಾಗಿದೆ. ವಕೀಲರ ಮೇಲೆ ನಡೆಯುತ್ತಿರುವ ಇಂತಹ ಪ್ರಕರಣಗಳು ತೀವ್ರ ಆಘಾತವನ್ನುಂಟು ಮಾಡುತ್ತಿದೆ. ಕಾನೂನು ಕಾಪಾಡುವವರಿಗೆ ರಕ್ಷಣೆಯೇ ಇಲ್ಲವಾಗಿದೆ. ಪದೇಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಈ ಕುರಿತು ಸರ್ಕಾರ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಎಂ.ಎಸ್. ಬಾಣದ, ಕಾರ್ಯದರ್ಶಿ ಎಚ್.ಎಸ್. ಶಿಗ್ಗಾಂವ ಹಾಗೂ ಅಶೋಕ ಅಕ್ಕಿ, ಶ್ರೀಕಾಂತ ಗುಳೇದ, ಜಿ.ಡಿ. ಜಂತ್ಲಿ, ಶಿವಕುಮಾರ, ಕೆ.ಬಿ. ಶಿವಕುಮಾರ, ಎಲ್.ಎಸ್. ಪಾಟೀಲ, ಬಸವರಾಜ ಕೋರಿಮಠ, ಎಸ್.ವೈ. ಬೆನಕನ್ನವರ, ಕಾಂಚನಾ ಹಣಗಿ, ಶ್ರೇಯಾ ಕಟಗಿಮಠ, ಸೇರಿದಂತೆ ನೂರಾರು ಮಂದಿ ವಕೀಲರು ಪಾಲ್ಗೊಂಡಿದ್ದರು.