ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಪೊನಂಪೇಟೆ ತಾಲೂಕು ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿಯ ತಿತಿಮತಿ ಭದ್ರಕೋಳ ಸಮೀಪ ಶುಕ್ರವಾರ ಕೇರಳ ಮೂಲದ ವ್ಯಕ್ತಿಗಳು ಈ ಮಾರ್ಗವಾಗಿ ಸಂಚರಿಸುತ್ತಿರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಬರೋಬ್ಬರಿ ಅಂದಾಜು 50 ಲಕ್ಷ ರು.ಗೂ ಹೆಚ್ಚು ಹಣ ದರೋಡೆಯಾಗಿದೆ ಎಂದು ಹೇಳಲಾಗುತ್ತಿದೆ. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡವರು ರಾತ್ರಿ ದೂರು ನೀಡಿದ್ದಾರೆ.ಇದೀಗ ವಿಶೇಷ ತನಿಖಾ ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೇರಳದ ಮಲಪುರಂ ಜಿಲ್ಲೆಯ ಗುತ್ತಿಗೆದಾರ ಕೆ.ಶಂಜಾದ್ ಹಾಗೂ ಆತನ ಸ್ನೇಹಿತ ಐನು ಎಂಬವರು ತಮ್ಮ ಬಳಿ ಇದ್ದ 750 ಗ್ರಾಂ ಚಿನ್ನಾಭರಣಗಳನ್ನು ಹಣದ ಅವಶ್ಯಕತೆ ಇರುವುದರಿಂದ, ಮೈಸೂರಿನಲ್ಲಿ ಹೆಚ್ಚಿನ ದರ ಸಿಗುವ ಅವಕಾಶ ಇರುವುದರಿಂದ ಶುಕ್ರವಾರ ಮಧ್ಯಾಹ್ನ ಮೈಸೂರಿನಲ್ಲಿ ಅಶೋಕ ರಸ್ತೆಯ ಚಿನ್ನದ ಅಂಗಡಿಯಲ್ಲಿ ಕರಗಿಸಿ ಅದನ್ನು ಅಲ್ಲೇ ಮಾರಾಟ ಮಾಡಿ 50 ಲಕ್ಷ ರುಪಾಯಿ ಹಣವನ್ನು ಪಡೆದುಕೊಂಡು ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ಆಗಮಿಸಿದ್ದಾರೆ. ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೊಳ ಸಮೀಪ ಕೆಟ್ಟು ನಿಂತ ಲಾರಿಯ ಬಳಿಯಲ್ಲಿ ನಿಂತಿದ್ದ 10ರಿಂದ 15 ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಹಣ ನೀಡುವಂತೆ ಕೇಳಿಕೊಂಡಾಗ ತಮ್ಮ ಬಳಿ ಯಾವುದೇ ಹಣವಿಲ್ಲ ಎಂದು ಹೇಳಿದ್ದರು. ಆಗ ಇವರಿಬ್ಬರನ್ನು ಬೇರೆ ಕಾರಿನಲ್ಲಿ ಕೂರಿಸಿಕೊಂಡು ಇವರ ಮಿನಿ ಕೂಪರ್ ಕಾರನ್ನು ಅಪಹರಿಸಿದ್ದಾರೆ.ನಂತರ ಇವರಿಗೆ ಗೊತ್ತಿಲ್ಲದ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇವರಿಬ್ಬರೂ ನಡೆದುಕೊಂಡೆ ಬಂದು ಮುಖ್ಯ ರಸ್ತೆಗೆ ಸೇರಿದ್ದಾರೆ. ನಂತರ ಪೇಪರ್ ಕಾರಿಗೆ ಅಡ್ಡಗಟ್ಟಿ ನಿಲ್ಲಿಸಿ ಆ ಕಾರಿನಲ್ಲಿ ಬಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಕಾರಿನ ಡಿಕ್ಕಿಯಲ್ಲಿ ಇದ್ದ 50 ಲಕ್ಷ ರುಪಾಯಿ ಹಾಗೂ ಕಾರು ಸೇರಿ ಒಟ್ಟು 70 ಲಕ್ಷ ರು. ದರೋಡೆಯಾದಂತಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ನೇತೃತ್ವದಲ್ಲಿ ಡಿವೈಎಸ್ಪಿ, ಮೂರು ಇನ್‌ಸ್ಪೆಕ್ಟರ್, ಏಳು ಸಬ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶನಿವಾರ ಘಟನಾ ಸ್ಥಳಕ್ಕೆ ಐಜಿ ಭೇಟಿ ನೀಡಿದ್ದಾರೆ.ದರೋಡೆಕೋರರು ಅಪಹರಿಸಿದ್ದ ಮಿನಿ ಕೂಪರ್ ಕಾರು ಕೊಳ್ತೋಡು ಬೈಗೂಡುವಿನಲ್ಲಿ ಪತ್ತೆಹಚ್ಚಲಾಗಿದೆ. ಮೂರು ವಾಹನ ಹಾಗೂ ಒಂದು ಗೂಡ್ಸ್ ವಾಹನದಲ್ಲಿ ಬಂದು ಇವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿರಾಜಪೇಟೆ ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.