ಸಾರಾಂಶ
ಹಾನಗಲ್ಲ: ಕಡಿಮೆ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ನೀಡುವಂತೆ ಶಾಸಕ ಶ್ರೀನಿವಾಸ ಮಾನೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿ ಹೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಡಿಮೆ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ವೋಲ್ಟೇಜ್ ಸಮಸ್ಯೆ ಸಾಮಾನ್ಯ ಎನಿಸಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ವಿದ್ಯುತ್ ಪರಿವರ್ತಕಗಳ ಸಾಮರ್ಥ್ಯವನ್ನೂ ಹೆಚ್ಚಿಸಬೇಕಿದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಪರಿವರ್ತಕಗಳ ಅಳವಡಿಕೆಯ ಅಗತ್ಯವಿದ್ದು, ಈ ಕುರಿತಂತೆ ಸಮಗ್ರ ವರದಿ ಸಿದ್ಧಪಡಿಸಿ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಅವರಿಗೆ ಸೂಚಿಸಿದರು.ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ಚುರುಕುಗೊಳಿಸಬೇಕು. ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಿ. ಅಪಾಯಕಾರಿ ಲೈನ್‌ಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದ ಗ್ರಾಪಂಗಳಿಂದ ವಂತಿಗೆ ಭರಿಸಿಕೊಂಡು ಅವುಗಳಿಗೆ ಲೈನ್ ಸಂಪರ್ಕ ಕಲ್ಪಿಸಿ ವಿದ್ಯುತ್ ಉಳಿತಾಯಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿ ಎಂದು ಸೂಚಿಸಿದರು.
ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ನಿಗಾ ವಹಿಸಿ. ವಿದ್ಯುತ್ ಪೂರೈಕೆಯ ಸಮಯದ ಕುರಿತು ಮಾಹಿತಿ ನೀಡಿ, ರೈತ ಸಮೂಹದಲ್ಲಿ ಜಾಗೃತಿ ಮೂಡಿಸಿ. ಅನವಶ್ಯಕವಾಗಿ ಹೊಲ, ಗದ್ದೆಗಳಲ್ಲಿ ಕಾಯ್ದು ನಿಲ್ಲುವಂತೆ ಮಾಡದಿರಿ. ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಿಬ್ಬಂದಿಯೊಬ್ಬರನ್ನು ನಿಯೋಜಿಸಿ ಎಂದು ಶ್ರೀನಿವಾಸ ಮಾನೆ ಸೂಚನೆ ನೀಡಿದರು.ಬಾಳಂಬೀಡ ೧೧೦ ಕೆವಿ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಇನ್ನುಳಿದ ಕಾರ್ಯ ಚಟುವಟಿಕೆ ಆಮೆಗತಿಯಲ್ಲಿ ಸಾಗುತ್ತಿರುವ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಾನೆ, ಬಾಕಿ ಉಳಿದ ಪ್ರಕ್ರಿಯೆಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ಹುಬ್ಬಳ್ಳಿ ವಿಭಾಗದ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಹರೀಶ್ ಅವರಿಗೆ ಸೂಚಿಸಿದರು.೯ಎಚ್‌ಎನ್‌ಎಲ್೧
ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಹೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.