ಕಲ್ಲೇಶ್ವರ ಕಿರಿಯ ಪ್ರಾಥಮಿಕ ಶಾಲೆಗೆ 25 ವರ್ಷದ ಸಂಭ್ರಮ

| Published : May 06 2025, 12:21 AM IST

ಸಾರಾಂಶ

ಅಖಂಡ ಕೂಡ್ಲಿಗಿ ತಾಲೂಕಿನ ನಿಂಬಳಗೆರೆಯಲ್ಲಿ ಊರಿನ ಪೋಷಕರು, ಹಿರಿಯರ ಅಪೇಕ್ಷೆಯಂತೆ 1999-2000ರಲ್ಲಿ ಆರಂಭವಾದ ಶ್ರೀ ಕಲ್ಲೇಶ್ವರ ಕಿರಿಯ ಪ್ರಾಥಮಿಕ ಶಾಲೆಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ.

ಊರಿನ ಹಿರಿಯರ ಅಪೇಕ್ಷೆಯಂತೆ ಪ್ರಾರಂಭವಾದ ಶಾಲೆ । ಕೂಡ್ಲಿಗಿ ಕ್ಷೇತ್ರದ ಶಾಸಕರಿಂದಲೂ ಮೆಚ್ಚುಗೆಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಅಖಂಡ ಕೂಡ್ಲಿಗಿ ತಾಲೂಕಿನ ನಿಂಬಳಗೆರೆಯಲ್ಲಿ ಊರಿನ ಪೋಷಕರು, ಹಿರಿಯರ ಅಪೇಕ್ಷೆಯಂತೆ 1999-2000ರಲ್ಲಿ ಆರಂಭವಾದ ಶ್ರೀ ಕಲ್ಲೇಶ್ವರ ಕಿರಿಯ ಪ್ರಾಥಮಿಕ ಶಾಲೆಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ.

ಕಲ್ಲೇಶ್ವರ ಸ್ವಾಮಿ ವಿದ್ಯಾ ಸಂಸ್ಥೆ ಅಡಿಯಲ್ಲಿ ಪ್ರಾರಂಭವಾದ ಕಲ್ಲೇಶ್ವರ ಕಿರಿಯ ಪ್ರಾಥಮಿಕ ಶಾಲೆ ಹಲವಾರು ಏಳು ಬೀ‍ಳುಗಳನ್ನು ಕಂಡಿದೆ. ಕೇವಲ 34 ವಿದ್ಯಾರ್ಥಿಗಳು ಮತ್ತು 3 ಶಿಕ್ಷಕರೊಂದಿಗೆ ಚಿಕ್ಕ ಹಳೆಯ ಕಟ್ಟಡದಲ್ಲಿ ಆರಂಭವಾದ ಶಾಲೆ ಇಂದು ವಿಶಾಲವಾದ ಸದೃಢ ಕಟ್ಟಡಕ್ಕೆ ಸ್ಥಳಾಂತರವಾಗಿದ್ದು, 2024-25ನೇ ಶೈಕ್ಷಣಿಕ ವರ್ಷಕ್ಕೆ 365 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಬಿಎ, ಬಿಇಡಿ ಪದವೀಧರರಾಗಿದ್ದ ವೀರಣ್ಣ ಈ ಸಂಸ್ಥೆಯ ರೂವಾರಿ. ಚಿತ್ರದುರ್ಗದ ಬಾಪೂಜಿ ವಿದ್ಯಾಸಂಸ್ಥೆಯ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಲೇ ತಮ್ಮೂರಿನಲ್ಲೇ ಶೈಕ್ಷಣಿಕ ಸಂಸ್ಥೆಯೊಂದನ್ನು ಆರಂಭಿಸಬೇಕೆಂಬ ಕನಸು ಕಂಡಿದ್ದರು.

ವೀರಣ್ಣ ತಮ್ಮ ನೌಕರಿ ಬಿಟ್ಟು ಪೂರ್ಣಾವಧಿಗೆ ಈ ಶಾಲೆಯ ಆಡಳಿತ ನಡೆಸಿದರು. ಪತ್ನಿ ಕೆ.ಶಿವಲೀಲಾ ಮುಖ್ಯ ಶಿಕ್ಷಕಿಯಾಗಿ ಪೂರ್ಣ ಜವಾಬ್ದಾರಿ ತೆಗೆದುಕೊಂಡು ಅದೇ ಕಟ್ಟಡದಲ್ಲಿ 4 ತಿಂಗಳ ಮಗಳೊಂದಿಗೆ ಪಾಠ ಮಾಡುತ್ತಿದ್ದರು.

2011-12ರಲ್ಲಿ ಶಾಲೆ ನೂತನ, ವಿಶಾಲ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಪೋಷಕರು ಸರಿಯಾಗಿ ಶುಲ್ಕ ಕಟ್ಟದಿದ್ದರೂ, ಬೇರೆ ಕಡೆಯಿಂದ ಹಣ ಜೋಡಿಸಿ, ಶಾಲೆ ನಿರ್ವಹಣೆ ಮಾಡಿದರು ವೀರಣ್ಣ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲೂ ಈ ಶಾಲೆಯ ಮಕ್ಕಳದೇ ಮೇಲುಗೈ. ವರ್ಷದ ಕೊನೆಯಲ್ಲಿ ಮಾಡುವ ಈ ಮಕ್ಕಳ ಹಬ್ಬವನ್ನು ಎಲ್ಲಾ ಪೋಷಕರು ತಮ್ಮ ಮನೆಗಳಿಗೆ ನೆಂಟರನ್ನು ಕರೆಸಿ ಶಾಲೆಯ ಹಬ್ಬವನ್ನು ಸಂಭ್ರಮಿಸುವುದು ಇಲ್ಲಿಯ ವಿಶೇಷ. ಈ ಎಲ್ಲಾ ಚಟುವಟಿಕೆ ಆಧಾರಿತ ಕಲಿಕೆಯ ಹಿನ್ನೆಲೆ ಕಂಡ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರು.

ನಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ವೈದ್ಯ, ಎಂಜಿನಿಯರ್ ಸೇರಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಶಿಕ್ಷಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ನಮಗೆ ಇದಕ್ಕಿಂತ ಸಂತಸ ಬೇಕೇ? ನಮ್ಮ ಈ ಪರಿಶ್ರಮಕ್ಕೆ ಸಹಕರಿಸಿದ ಊರಿನ ಹಿರಿಯರು, ಜನಪ್ರತಿನಿಧಿಗಳು, ನಮ್ಮ ತಂದೆ ತಾಯಿಯವರ ಆಶೀರ್ವಾದ, ನನ್ನ ಸಹೋದರ, ಸಹೋದರಿಯರು, ಮಾವ, ಅಳಿಯಂದಿರು, ನಮ್ಮ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಎಲ್ಲಾ ಯುವ ಮಿತ್ರರ ಸಹಕಾರವನ್ನು ನಾವು ಎಂದಿಗೂ ಮರೆಯುವಂತಿಲ್ಲ ಎನ್ನುತ್ತಾರೆ ಕಲ್ಲೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್. ವೀರಣ್ಣ.