ತಾಲೂಕಿನ ಇತಿಹಾಸ ಪ್ರಸಿದ್ದ ಸಿಂಗಟಗೆರೆಯ ಶ್ರೀ ಕಲ್ಲೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವ ಸೋಮವಾರ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ವಿಜೃಂಭಣೆಯಿಂದ ನೆರವೇರಿತು.

ಸಿಂಗಟಗೆರೆ ಜಾತ್ರೆ । ಕಲ್ಲೇಶ್ವರನ ಮೂರ್ತಿಯೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಅದ್ಧೂರಿಯ ಮೆರವಣಿಗೆ । ಸೈನಿಕರಿಗಾಗಿ ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ ಕಡೂರು

ತಾಲೂಕಿನ ಇತಿಹಾಸ ಪ್ರಸಿದ್ದ ಸಿಂಗಟಗೆರೆಯ ಶ್ರೀ ಕಲ್ಲೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವ ಸೋಮವಾರ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಸ್ವಾಮಿಯವರಿಗೆ ವಿಶೇಷ ರುದ್ರಾಭಿಷೇಕ, ನಿತ್ಯಹೋಮ, ರಥಾಧಿದೇವತಾ ಹೋಮ, ರಥ ಸಂಪ್ರೋಕ್ಷಣೆ ನಡೆದ ನಂತರ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಶ್ರೀ ಪಾರ್ವತಿದೇವಿಯವರ ಉತ್ಸವ ಮೂರ್ತಿಯೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಶ್ರೀ ಆಂಜನೇಯಸ್ವಾಮಿಯವರ ಜೊತೆ ಶ್ರೀ ಕಲ್ಲೇಶ್ವರ ಸ್ವಾಮಿಯವರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ರಥ ಬೀದಿ ಬಳಿ ಕರೆತಂದ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಟಾಪಿಸಿ ಬಲಿ ಪ್ರಧಾನ ಪೂಜೆ ನೆರವೇರಿಸಲಾಯಿತು. ರಥ ಎಳೆಯುವುದಕ್ಕೂ ಮುನ್ನ ದೇವರಿಗೆ ದೃಷ್ಟಿ ತೆಗೆವ ಬಾಳೇಕಂದನ್ನು ಕಡಿವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ಜಯ ಘೋಷಗಳೊಂದಿಗೆ ಎಳೆದು ಸಂಭ್ರಮಿಸಿದರು. ರಥದ ಕಳಸಕ್ಕೆ ಸಾವಿರಾರು ಭಕ್ತರು ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ರಥಕ್ಕೆ ಎಸೆದಿದ್ದ ಮೆಣಸಿನ ಕಾಳನ್ನು ಭಕ್ತರು ಸಂಗ್ರಹಿಸುತ್ತಿದ್ದು ಜನರ ಗಮನ ಸೆಳೆಯಿತು.

ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಾಗೇಶ್ ಶರ್ಮಾ ಮತ್ತು ಸೀತಾರಾಮಶರ್ಮ ತಂಡದವರಿಂದ ನೆರವೇರಿತು.

ರಥೋತ್ಸವ ನಡೆದ ಬಳಿಕ ಸುಮಾರು ಒಂದು ತಾಸು ಮಳೆ ಸುರಿದ ಪರಿಣಾಮ ವಾತಾವರಣ ತಂಪಾಗಿಸಿ ಭಕ್ತರು ಸಂತಸದಲ್ಲಿ ನೆನೆದರು. ಜಾತ್ರಾ ಮಹೋತ್ಸವದ ಅಂಗವಾಗಿ ವಾಹನ ಸಂಚಾರದ ದಟ್ಟಣೆ ಹೆಚ್ಚಾಗಿತ್ತು. ಸಿಂಗಟಗೆರೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ಬಿ,ಕೆ.ನಾಗರಾಜ್, ದೇವಾಲಯ ಸಮಿತಿಯ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಉದಯ್ ಕುಮಾರ್, ಎಚ್. ಕಲ್ಲೇಶಪ್ಪ, ಎನ್.ಪಿ. ಶಿವಕುಮಾರ್, ಎಸ್.ಕೆ.‌ನಾಗರಾಜ್, ಲೋಕೇಶಪ್ಪ, ದಕ್ಷ್ರಿಣ ಮೂರ್ತಿ, ದೇವರಾಜ್, ಬಿ.ಜೆ. ಕುಮಾರ್, ಶಿವಣ್ಣ. ಕೆ. ಮೂರ್ತಿ ಸೇರಿದಂತೆ ಏಳು ಹಳ್ಳಿ ಪಿರ್ಕಾ ಗ್ರಾಮಸ್ಥರು ಇದ್ದರು

ಸೈನಿಕರ ಆತ್ಮ ಬಲ ಹೆಚ್ಚಿಸಲು ವಿಶೇಷ ಪೂಜೆ, ಹೋಮ

ದೇವಾಲಯದ ಧರ್ಮದರ್ಶಿ ಬಿ.ಕೆ.‌ನಾಗರಾಜ್ ಮಾತನಾಡಿ, ಅಸಂಖ್ಯಾತ ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ಜರುಗುತ್ತಿದ್ದು, ವಿಶೇಷವಾಗಿ ಈ ಭಾರಿ ಭಾರತ ಮತ್ತು ಪಾಕ್ ನಡುವಿನ ಅಪರೇಷನ್ ಸಿಂದೂರ ದಾಳಿಯನ್ನು ಯಶಸ್ವಿಯಾಗಿ ನಡೆಸಿದ ಹೆಮ್ಮೆಯ ನಮ್ಮ ಭಾರತ ದೇಶದ ಯೋಧರಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಹಾಗೂ ಲೋಕ ಕಲ್ವಾಣಕ್ಕಾಗಿ ವಿಶೇಷ ಪೂಜೆಗಳು ಹೋಮಾದಿ ಕಾರ್ಯಗಳನ್ನು ಪ್ರತ್ಯೇಕವಾಗಿ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗಿದೆ.