ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮಕ್ಕಳಲ್ಲಿ ಪೋಷಕರು ವಿನಯ ಮತ್ತು ವಿವೇಕತೆಯನ್ನು ಕಲಿಸಿ ಎಂದು ಹಾಸನದ ಶ್ರೀ ಆದಿಚುಂಚನಗಿರಿ ಶಾಖಾಮಠದ ಮಠಾಧೀಶರಾದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಅವರು ತಿಳಿಸಿದರು.ಅವರು 2023-24 ನೇ ಸಾಲಿನ ಗೌಡಳ್ಳಿ ಬಿಜಿಎಸ್ ಶಾಲೆಯ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದ ಬಗ್ಗೆ ಮಕ್ಕಳಿಗೆ ಮನವರಿಕೆಯನ್ನು ಮಾಡಬೇಕು ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಯಲು ಗೌರವಯುತವಾಗಿ ಇರಬೇಕು ಪ್ರತಿಯೊಂದು ವಿದ್ಯಾಸಂಸ್ಥೆ ತನ್ನದೇ ಆದ ಕನಸನ್ನು ಕಂಡಿರುತ್ತದೆ. ಆ ಸಂಸ್ಥೆಯ ಕನಸು ನನಸು ಮಾಡುವ ಶಕ್ತಿ ವಿದ್ಯಾರ್ಥಿಗಳಲ್ಲಿರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಶಾಸಕ ಮಂತರ್ ಗೌಡ ಮಾತನಾಡಿ ಪೋಷಕರು ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಕೆ ಮಾಡಬೇಡಿ, ಮಕ್ಕಳನ್ನು ಸೂಕ್ಷ್ಮವಾಗಿ ಗ್ರಹಿಸಿ ಶಿಕ್ಷಕರು ಪಾಠ ಮಾಡಬೇಕು. ವಿದ್ಯಾಭ್ಯಾಸವು ಮಕ್ಕಳ ಜೀವನಕ್ಕೆ ಶಾಶ್ವತವಾಗಿರುತ್ತದೆ ಎಲ್ಲಾ ಮಕ್ಕಳಿಗೂ ವೇದಿಕೆ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ ಎಂದರು.ಮುಖ್ಯ ಭಾಷಣಕಾರರಾಗಿ ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್ ಗೌಡ ಮಾತನಾಡಿ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ತೋರಿಸುವಂತೆ ಪೋಷಕರು ಪ್ರೇರೇಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಶಾಲೆಯ ಹಳೆ ವಿದ್ಯಾರ್ಥಿ ಶಶಿತ್ ಗೌಡ, ಗೌಡಳ್ಳಿ ಪ್ರೌಢಶಾಲೆಯ ಎಚ್.ಎಸ್. ಸಂಜಯ್, ಮಹಮದ್ ಸುಫೈಲ್, ಜಿ,ಆರ್, ಕೌಶಿಕ್ ಇವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಕಳಲೆ ಕೃಷ್ಣೇಗೌಡ, ಜಿ.ಆರ್. ಹೂವಯ್ಯ ಭಾಗವಹಿಸಿದ್ದರು.