ಕಲ್ಪತರು ನಾಡಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ: ವಿ.ಸೋಮಣ್ಣ

| Published : Apr 01 2024, 12:50 AM IST

ಕಲ್ಪತರು ನಾಡಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ: ವಿ.ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿ ಬೆಲೆ ಬಹಳ ವರ್ಷಗಳಿಂದ ಕುಸಿತ ಕಾಣುತ್ತಿದ್ದು, ರೈತರು ಬಹಳ ಸಂಕಷ್ಟದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ಲೋಕಸಬಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಕಲ್ಪತರು ನಾಡಿನ ಸಮಗ್ರ ಅಭಿವೃದ್ಧಿಗೆ ೧೦ ಸಾವಿರ ಕೋಟಿ ರು.ಗಳ ವಿಶೇಷ ಪ್ಯಾಕೇಜ್ ತರುವುದಲ್ಲದೆ, ಇಲ್ಲಿನ ಪ್ರಮುಖ ವಾಣಿಜ್ಯ ಬೆಲೆ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ಕೊಡಿಸಲು ನನ್ನ ಶಕ್ತಿಮೀರಿ ಶ್ರಮಿಸುತ್ತೇನೆಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಮಣ್ಣ ತಿಳಿಸಿದರು.

ನಗರದ ಗುರುಗುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಭಾನುವಾರ ಆಯೋಜಿಸಲಾಗಿದ್ದ ಬಿಜೆಪಿ-ಜೆಡಿಎಸ್ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಬಹಳ ಹಿಂದಿನಿಂದಲೂ ಅರ್ಥಮಾಡಿಕೊಂಡಿದ್ದು, ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿ ಬೆಲೆ ಬಹಳ ವರ್ಷಗಳಿಂದ ಕುಸಿತ ಕಾಣುತ್ತಿದ್ದು, ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ಮೋದಿಯವರು ೩ನೇ ಭಾರಿಗೆ ಅಧಿಕಾರ ಹಿಡಿಯುತ್ತಿರುವುದು ಸಹ ದೇಶದ ಅನ್ನದಾತರ ಸಮಸ್ಯೆಗಳಿಗೆ ಶಾಶ್ವತ ಯೋಜನೆ ರೂಪಿಸುವ ಗುರಿ ಇಟ್ಟುಕೊಂಡಿದ್ದಾರೆ. ದೇಶದ ಭದ್ರತೆ ಅವರಿಗೆ ಎಷ್ಟು ಮುಖ್ಯವೋ, ಹಾಗೆಯೇ ನಿರುದ್ಯೋಗ, ಮಹಿಳೆಯರ ಸಂಕಷ್ಟಗಳು, ನೀರಾವರಿ ಸಮಸ್ಯೆಗಳ ಬಗ್ಗೆಯೂ ಅವರಿಗೆ ಬಹು ದೊಡ್ಡ ಕನಸ್ಸಿದೆ. ಇದು ಭಾರತದ ಏಕತೆ, ಸಮಗ್ರತೆಯ ಚುನಾವಣೆಯಾಗಿದ್ದು, ಇದಕ್ಕೆ ನರೇಂದ್ರ ಮೋದಿಯವರಂತಹ ಪ್ರಾಮಾಣಿಕ ವ್ಯಕ್ತಿ ಬೇಕಾಗಿರುವುದರಿಂದ ಪ್ರತಿಯೊಬ್ಬರೂ ಸಹ ಈ ಬಾರಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ನಮಗೆ ಮತ ನೀಡಬೇಕು. ನಮ್ಮ ಮೈತ್ರಿ ಸ್ಥಳೀಯ ನಾಯಕರು ಒಗ್ಗಟ್ಟಾಗಿ ಮನೆಮನೆಗೂ ಹೋಗಿ ಮೋದಿಯವರು ಯಾಕೆ ಅಧಿಕಾರ ಹಿಡಿಯಬೇಕೆಂಬ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿ, ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳಬೇಕು. ಏ.೩ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದು, ಅಂದು ಬಿ.ಎಸ್.ಯಡಿಯೂರಪ್ಪನವರೂ ಆಗಮಿಸಲಿದ್ದಾರೆ. ನಿಮ್ಮೆಲರ ಶುಭ ಹಾರೈಕೆಗಳು ನನ್ನ ಮೇಲಿರಬೇಕೆಂದು ತಿಳಿಸಿದರು.

ಜೆಡಿಎಸ್ ಮುಖಂಡ ಕೆ.ಟಿ.ಶಾಂತ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಮೈತ್ರಿಯಾಗಿರುವುದರಿಂದ ಎನ್‌ಡಿಎ ಅತ್ಯಧಿಕ ಬಹುಮತದೊಂದಿಗೆ ೪೦೦ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗಳಿಸುವುದರಲ್ಲಿ ಅನುಮಾನವಿಲ್ಲ. ಬಿ.ಎಸ್.ಯಡಿಯೂರಪ್ಪ ಹೇಳಿರುವಂತೆ ರಾಜ್ಯದಲ್ಲಿಯೂ ೨೮ ಲೋಕಸಭಾ ಸ್ಥಾನಗಳನ್ನು ಎನ್‌ಡಿಎ ಗಳಿಸಲಿದೆ. ದೇಶದ ಅಭಿವೃದ್ಧಿಗಾಗಿ ಓಲೈಕೆ ರಾಜಕಾರಣ ಮಾಡುತ್ತಿರುವ ಪಕ್ಷಗಳನ್ನು ದೂರವಿಡಬೇಕು. ಸ್ಥಳೀಯ ಚುನಾವಣೆ ದುಡ್ಡಿನ ಬಲದ ಮೇಲೆ ನಡೆಯುತ್ತದೆ ಆದರೆ ಇದು ಲೋಕಸಭಾ ಚುನಾವಣೆ, ರಾಷ್ಟ್ರೀಯತೆ, ಅಭಿವೃದ್ಧಿಯ ಆಧಾರದ ಮೇಲೆ ನಡೆಯುತ್ತಿದ್ದು, ಪ್ರತಿಯೊಬ್ಬರೂ ಮೋದಿಯವರನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಮುಖಂಡರಾದ ನೆ.ಲ.ನರೇಂದ್ರಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಶಿವಸ್ವಾಮಿ, ಬಿಜೆಪಿ ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್, ನಗರಾಧ್ಯಕ್ಷ ಸುರೇಶ್, ಮುಖಂಡರಾದ ಲಿಂಗರಾಜು, ಗಂಗರಾಜು, ಬಿಸಲೇಹಳ್ಳಿ ಜಗದೀಶ್, ಪ್ರಸನ್ನಕುಮಾರ್, ಹರಿ ಸಮುದ್ರ ಗಂಗಾಧರ್ ಇನ್ನಿತರರು ಉಪಸ್ಥಿತರಿದ್ದರು.

ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ: ನಾಗೇಶ್: ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಈ ದೇಶ ಅಭಿವೃದ್ಧಿ ಹೊಂದಬೇಕಾದರೆ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ. ಪ್ರತಿ ಹಳ್ಳಿಯ ಮನೆಗಳಿಗೆ ಕುಡಿಯುವ ನೀರು, ಗ್ಯಾಸ್ ಸಂಪರ್ಕ, ಶೌಚಾಲಯಗಳನ್ನು ಒದಗಿಸಿಕೊಟ್ಟಿರುವ ಮೋದಿಯವರಿಗೆ ದೇಶದ ಎಲ್ಲ ಪ್ರಜೆಗಳ ಕಷ್ಟ ಗೊತ್ತಿದೆ. ದೇಶದ ಪ್ರತಿ ಪ್ರಜೆಗೂ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಎನ್‌ಇಪಿ ಜಾರಿಗೆ ತಂದರು. ಇಂತಹ ಮೋದಿ ಮತ್ತೆ ಪ್ರಧಾನಿಯಾಗಲು ಅತ್ಯಧಿಕ ಬಹುಮತದಿಂದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

‘ಐಎನ್‌ಡಿಐಎ ಮಿತ್ರ ಪಕ್ಷವನ್ನು ಓಲೈಸಲು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ ಕಾಂಗ್ರೆಸ್ ಸರಕಾರ ಜಿಲ್ಲೆಯ ಪಾಲಿನ ಹೇಮಾವತಿ ನೀರಿಗೂ ಕನ್ನ ಹಾಕಿ ರಾಮನಗರ ಮತ್ತು ಮಾಗಡಿಗೆ ತೆಗೆದುಕೊಂಡು ಹೋಗಲು ಹವಣಿಸುತ್ತಿದೆ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡಬಾರದು.’

- ಕೆ.ಟಿ.ಶಾಂತಕುಮಾರ್, ಜೆಡಿಎಸ್ ಮುಖಂಡ.