ಸಾರಾಂಶ
ದೇವದರ್ಗ ಪಟ್ಟಣದ ಬಸವ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಆವರಣದಲ್ಲಿ ರಾಯಚೂರು ವಿವಿ ಆಯೋಜಿಸಿದ್ದ ವಾರ್ಷಿಕ ಪ್ರಚಾರೋಪನ್ಯಾಸ ಮಾಲೆ-೦೫ ಸಮಾರಂಭವನ್ನು ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಉದ್ಘಾಟಿಸಿದರು.
ಕನ್ನಡಪ್ರಭ ವರ್ತೆ ದೇವದುರ್ಗ
ಕಲ್ಯಾಣ ಕರ್ನಾಟಕ ಪ್ರದೇಶ ಎಲ್ಲಾ ರಂಗಗಳಲ್ಲಿಯೂ ಸ್ಫೂರ್ತಿ, ಸಾಧನೆ, ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಹಿನ್ನೋಟ ಸೇರಿದಂತೆ ಹಲವಾರು ಸಾಧಕರ, ವಿದ್ವಾಂಸರ ನೆಲೆಯಾಗಿದ್ದು, ಸಮೃದ್ಧಿ ಪ್ರದೇಶವಾಗಿದೆ. ದಯವಿಟ್ಟು ಹಿಂದುಳುವಿಕೆಯ ರಾಗದಿಂದ ಹೊರಬರಬೇಕೆಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಕರೆ ನೀಡಿದರು.ಪಟ್ಟಣದ ಬಸವ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಆವರಣದಲ್ಲಿ ರಾಯಚೂರು ವಿಶ್ವವಿದ್ಯಾಲಯ ಶನಿವಾರ ಅಯೋಜಿಸಿದ್ದ ವಾರ್ಷಿಕ ಪ್ರಚಾರೋಪನ್ಯಾಸ ಮಾಲೆ-೦೫ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾಹಿತ್ಯ, ಸಾಂಸ್ಕೃತಿಕ, ಸಂಗಿತ, ಕಲೆ ಕ್ಷೇತ್ರಗಳಲ್ಲಿ ಈ ಪ್ರದೇಶ ಮಹತ್ತರ ಕೊಡುಗೆ ನೀಡಿದೆ. ಅನೇಕ ವಿದ್ವಾಂಸರನ್ನು, ಪರಿಣಿತರನ್ನು ದೇಶಕ್ಕೆ ನೀಡಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕಲಿಕಾ ಆಸಕ್ತಿ ಎಲ್ಲರಲ್ಲೂ ಮೂಡಬೇಕಾಗಿದೆ. ಕಾಪಿ (ನಕಲು) ಪರಿಪಾಠದಿಂದ ವಿದ್ಯಾರ್ಥಿಗಳು ಶಾಶ್ವತವಾಗಿ ಹೊರಬರಬೇಕಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಅಪಾರ ಅವಕಾಶ ಮತ್ತು ಗೌರವಗಳು ಇವೆ. ವಿಶ್ವವಿದ್ಯಾಲಯದ ಚಟುವಟಿಕೆಗಳು, ಕಾರ್ಯಕ್ರಮಗಳು , ಚಿಂತನೆಗಳು ಪ್ರತಿಯೊಬ್ಬರ ಮನೆ-ಮನ ತಲುಪಬೇಕೆಂಬ ಉದ್ದೇಶ ದಿಂದ ಪ್ರಸಾರಂಗ ವಿಭಾಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ವಿಷಯತಜ್ಞರ ವಿಚಾರ, ಚಿಂತನೆಗಳನ್ನು ಅಭ್ಯಾಸ ಮತ್ತು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಗಳು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ತಿಳಿಸಿದರು.ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರುಪಾಕ್ಷಿಗೌಡ ಮುಷ್ಠೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಪ್ರಥಮ ದರ್ಜೆ ಕಾಲೇಜು ಇಂಗ್ಲೀಷ ಸಹ ಪ್ರಾಧ್ಯಾಪಕ ಪ್ರೊ.ಜಿ.ಕೆ ಬಡಿಗೇರ,ಭಾರತೀಯ ಜ್ಞಾನ ಪರಂಪರೆಯಲ್ಲಿ ವೈಜ್ಞಾನಿಕ ಚಿಂತನೆ ವಿಷಯದಲ್ಲಿ ಉಪನ್ಯಾಸ ಮಂಡಿಸಿದರು.
ಮೌಲ್ಯಗಳು ಮತ್ತು ಸಮಕಾಲೀನ ಭಾರತೀಯ ಸಮಾಜ ಕುರಿತು ಧಾರವಾಡ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕಿ ಪ್ರೊ.ಡಾ.ಬಸವರಾಜೇಶ್ವರಿ ಆರ್.ಪಾಟೀಲ್, ರಾಯಚೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಪ್ರೊ.ವೆಂಕಟೇಶ ಕೆ. ಬಸವಣ್ಣನವರ ಚಿಂತನೆಗಳಲ್ಲಿ ವರ್ತಮಾನದ ಪ್ರಸ್ತುತತೆ ಹಾಗೂ ದೇವದುರ್ಗ ತಾಲೂಕು ಸಾಹಿತ್ಯಾವಲೋಕನ ಕುರಿತು ಸಾಹಿತಿ ಶಂಕರ ಉಭಾಳೆ ಉಪನ್ಯಾಸ ನೀಡಿದರು.ವಿಶ್ವವಿದ್ಯಾಲಯ ಪ್ರಸಾರಂಗ ವಿಭಾಗದ ಸಲಹಾ ಸಮಿತಿ ಸದಸ್ಯ ಬುದ್ಧಘೋಷ ದೇವೇಂದ್ರ ಹೆಗ್ಗಡೆ, ಪ್ರಸಾರಂಭ ವಿಭಾಗದ ಸಂಯೋಜಕ ಡಾ.ಶರಣಪ್ಪ ಛಲವಾದಿ ಮಾತನಾಡಿದರು.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನರಸಿಂಗರಾವ್ ಸರಕೀಲ್,ಉಪನ್ಯಾಸಕ ಶಾಮಸುಂದರ,ಸಂಸ್ಥೆ ಸಲಹೆಗಾರ ತಿರುಪತಿ ಸೂಗೂರ,ಪ್ರಾಚಾರ್ಯ ಹನುಮಂತರಾಯ ನಾಯಕ ಉಪಸ್ಥಿತರಿದ್ದರು. ಉಪನ್ಯಾಸಕ ಮಲ್ಲೇಶ ನೂಲಿ,ಉಪನ್ಯಾಸಕಿ ಗಿರಿಜಾ ನಿರೂಪಿಸಿದರು.