ಸಾರಾಂಶ
ಪೂರ್ವಭಾವಿ ಸಭೆಯಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಮಾತು
ಕನ್ನಡಪ್ರಭ ವಾರ್ತೆ ಭಾಲ್ಕಿ:
ಶರಣರು ಕೊಟ್ಟ ಸಂದೇಶ ಮರಣವೇ ಮಹಾನವಮಿ. ಕಲ್ಯಾಣ ಕ್ರಾಂತಿ ವಿಜಯೋತ್ಸವ ಇಡೀ ಜಗತ್ತಿನ ಉತ್ಸವವಾಗಬೇಕೆಂದು ಹಿರೇಮಠ ಸಂಸ್ಥಾನ ಹಿರಿಯ ಸ್ವಾಮೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ನಡೆದ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ತಮಾನದಲ್ಲಿ ತತ್ವದ ಸಲುವಾಗಿ ಅನೇಕ ಶರಣರು ಬಲಿದಾನ ಮಾಡಿದ್ದಾರೆ. ಇದನ್ನು ಜಗತ್ತಿಗೆ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಒಬ್ಬರು ತಮ್ಮ ಧರ್ಮದ ತತ್ವಕ್ಕಾಗಿ ಸಿಲುಬೆಗೆ ಏರಿದ್ದನ್ನು ಜನತೆ ಅವರನ್ನು ದೇವರೆಂದು ಒಪ್ಪಿಕೊಂಡಿದೆ ಆದರೆ 12ನೇ ಶತಮಾನದಲ್ಲಿ ನೂರಾರು ಶರಣರು ತತ್ವಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದರೆ ಮಾಹಿತಿ ಕೊರತೆಯಿಂದ ಇದನ್ನು ಜನಮಾನಸಕ್ಕೆ ಮುಟ್ಟಿಸಲು ಆಗಲಿಲ್ಲ. ಶರಣ ತತ್ವ ಮರಣವೇ ಮಹಾನವಮಿ ಮತ್ತು ತತ್ವಕ್ಕಾಗಿ ನಡೆದ ಜಯ ಕಲ್ಯಾಣ ಕ್ರಾಂತಿ ವಿಜಯೋತ್ಸವ ಜಗತ್ತಿನ ಹಬ್ಬವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.ಭಾಲ್ಕಿಯಿಂದ ಪ್ರಾರಂಭವಾದ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬವು ರಾಷ್ಟ್ರಾದ್ಯಂತ ಎಲ್ಲರೂ ಆಚರಿಸುವಂತಾಗಬೇಕು. ತತ್ವಕ್ಕಾಗಿ ಸಮಾನತೆಗಾಗಿ ಬಲಿದಾನ ಮಾಡಿದ ದಿನ ಇದಾಗಿದೆ. ಹೀಗಾಗಿ ರಾಷ್ಟ್ರಾಧ್ಯಕ್ಷರು ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬಕ್ಕೆ ಚಾಲನೆ ನೀಡುವ ಕಾಲ ಬರುತ್ತದೆ ಎಂದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ ಹಿನ್ನಲೆಯ ಉತ್ಸವ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಅ. 3ರಿಂದ ಅ.12ರ ವರೆಗೆ ಚನ್ನಬಸವಾಶ್ರಮದಲ್ಲಿ ಆಚರಿಸಲಾಗುತ್ತಿದೆ. ಚಂದ್ರಕಲಾ ಪ್ರಭು ಡಿಗ್ಗೆಯವರ ಅಧ್ಯಕ್ಷತೆಯಲ್ಲಿ ನಿತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಕದಳಿ ವೇದಿಕೆಯ ಅಧ್ಯಕ್ಷೆ ಮಲ್ಲಮ್ಮ ನಾಗನಕೆರೆ ಅವರಿಂದ ಅ.3ರಿಂದ ಅ.11ರ ವರೆಗೆ ನಿತ್ಯ ಬೆಳಗ್ಗೆ 5 ಗಂಟೆಗೆ ಶಿವಯೋಗ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಚಂದ್ರಕಲಾ ಪ್ರಭು ಡಿಗ್ಗೆ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ಸ್ವಾಮಿಗಳು, ಪ್ರಭು ಡಿಗ್ಗೆ, ಮಲ್ಲಮ್ಮ ನಾಗನಕೇರೆ, ವೀರಣ್ಣ ಕುಂಬಾರ, ರಾಜು ಜುಬರೆ ಇದ್ದರು.