ಕಲ್ಯಾಣ ಮಂಟಪಕ್ಕೆ ಬೀಗ: ಅನಾಥ ವ್ಯಕ್ತಿ ಬೀದಿಗೆ

| Published : Apr 21 2024, 02:21 AM IST

ಸಾರಾಂಶ

ನಾಲ್ಕು ದಶಕಗಳಿಂದ ಗೋಕರ್ಣದ ದೈವಜ್ಞ ಕಲ್ಯಾಣಮಂಟಪದಲ್ಲಿ ಆಶ್ರಯ ಪಡೆದಿದ್ದ ಕರ್ಕಿ ಮೂಲದ ಅನಾಥ ವ್ಯಕ್ತಿ ಚಂದ್ರಕಾಂತ ಶೆಟ್ಟಿ, ಈಗ ಕಲ್ಯಾಣ ಮಂಟಪದ ಆಡಳಿತಾತ್ಮಕ ವಿವಾದದಿಂದ ಬೀಗ ಹಾಕಿದ ಪರಿಣಾಮ ಆಶ್ರಯಕ್ಕಾಗಿ ಪರದಾಡುತ್ತಿದ್ದಾರೆ.

ಗೋಕರ್ಣ: ನಾಲ್ಕು ದಶಕಗಳಿಂದ ಇಲ್ಲಿನ ದೈವಜ್ಞ ಕಲ್ಯಾಣಮಂಟಪದಲ್ಲಿ ಆಶ್ರಯ ಪಡೆದಿದ್ದ ಕರ್ಕಿ ಮೂಲದ ಅನಾಥ ವ್ಯಕ್ತಿ ಕಲ್ಯಾಣ ಮಂಟಪದ ಆಡಳಿತಾತ್ಮಕ ವಿವಾದದಿಂದ ಬೀಗ ಹಾಕಿದ ಪರಿಣಾಮ ಆಶ್ರಯಕ್ಕಾಗಿ ಪರದಾಡುತ್ತಿದ್ದು, ಸಂಘ- ಸಂಸ್ಥೆ ಅಥವಾ ಇವರ ಸಮಾಜ, ಕುಟುಂಬ ವರ್ಗದವರು ತುರ್ತು ಸಹಾಯ ಮಾಡಬೇಕಿದೆ.

ಕರ್ಕಿ ಮಠದ ಹತ್ತಿರದ ನಿವಾಸಿಯಾಗಿದ್ದ ಚಂದ್ರಕಾಂತ ಶೆಟ್ಟಿ ಅವರು ಎಂಬತ್ತರದ ದಶಕದಲ್ಲಿ ಕೆಲಸ ಅರಸುತ್ತಾ ಇಲ್ಲಿಗೆ ಬಂದು, ಇಲ್ಲಿನ ಕಲ್ಪನಾ ಸಿನಿಮಾ ಥಿಯೇಟರ್‌ನಲ್ಲಿ ರೀಲ್ ಬಿಡುವ ಕಾಯಕ ಮಾಡುತ್ತಿದ್ದರು. ಕಾಲಾಂತರದಲ್ಲಿ ಈ ಥಿಯೇಟರ್ ಬಂದಾಗಿದ್ದು, ನಂತರ ಪ್ರವಾಸಿಗರಿಗೆ ಹುರಿದ ಶೇಂಗಾ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದರು. ಈ ಉದ್ಯೋಗವೂ ಕೆಲ ಸಮಯದ ಬಳಿಕ ನಷ್ಟ ಹೊಂದಿತ್ತು. ನಂತರ ಪ್ರತಿ ಸಂಕಷ್ಟ ಚತುರ್ಥಿಯಂದು ಇಡಗುಂಜಿಗೆ ತೆರಳಿ ಮಹಾಗಣಪತಿಯ ಪ್ರಸಾದವನ್ನು ಜನರಿಗೆ ನೀಡುತ್ತಾ ಅವರ ಕೊಟ್ಟ ಅರೆಬರೆ ಕಾಸಿನಲ್ಲಿ ಜೀವನ ಮುಂದುವರಿಸಿದ್ದರು. ಕಲ್ಯಾಣಮಂಟಪದಲ್ಲಿ ವಸತಿ ಮಾಡಿ ಇಲ್ಲಿ ಉಳಿದುಕೊಳ್ಳಲು ಬರುವ ಪ್ರವಾಸಿಗರಿಗೆ ನೆರವಾಗುತ್ತಿದ್ದರು.

ಆದರೆ ಹಲವು ಕಾಯಿಲೆಯಂದ ಬಳಲುತ್ತಿದ್ದ ಇವರಿಗೆ ಇತ್ತೀಚೆಗೆ ಹೊಕ್ಕಳು ಉಬ್ಬಿ ಅದು ಅಂಬೆಲಿಕಲ್ ಹರ್ನಿಯಾ ಆಗಿ ಒಡೆದು ಹೋಗುವ ಸ್ಥಿತಿಯಲ್ಲಿದ್ದಾಗ ಗಮನಿಸಿದ ಹಲವರು ಸಹಾಯ ಮಾಡಿ ಆಶಾ ಕಾರ್ಯಕರ್ತರ ನೆರವಿನಿಂದ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಂಡು ಓಡಾಡಿಕೊಂಡಿದ್ದರು. ಇಡಗುಂಜಿ ಪ್ರಸಾದ ಸಂಕಷ್ಟಿ ದಿನ ಪರಿಚಯಸ್ಥರಿಗೆ ಮನೆಬಾಗಿಲಿಗೆ ತಂದುಕೊಡುವ ಮಹಾನ್ ಭಕ್ತರಾದ ಇವರು ಅದೆಷ್ಟೋ ಜನ ಪ್ರಸಾದಕ್ಕಾಗಿ ತಡರಾತ್ರಿವರೆಗೆ ಇವರು ಬರುವುದನ್ನು ಕಾಯುವ ಸ್ಥಿತಿ ಇತ್ತು. ಪ್ರಸಾದ ಸ್ವೀಕರಿಸಿದವರಿಗೆ ಅಂದಿನ ಆಗುಹೋಗುಗಳನ್ನು, ಜನರ ಸಂದಣಿ ಬಗ್ಗೆ ಆಕರ್ಷಕವಾಗಿ ವಿವರಿಸಿ ಮನ ಗೆದ್ದಿದ್ದರು.

ಶೇಟ್ ಮಾಮ ಬಂದ ಪ್ರಸಾದ ತಂದ ಅನ್ನುವಷ್ಟು ಮಟ್ಟಿಗೆ ಪ್ರಚಲಿತ ಆಗಿದ್ದಾರೆ. ವಸತಿಗೆ ದೊರೆತ ಕಲ್ಯಾಣ ಮಂಟಪದಿಂದ ಹೊರ ಹಾಕಿದ್ದರಿಂದ ಬೀದಿಪಾಲಾಗಿದ್ದು, ಪ್ರಸ್ತುತ ಯಾವುದೇ ಕಲಸವನ್ನು ಮಾಡಲು ಅಶಕ್ತರಾಗಿ ಮಹಾಬಲೇಶ್ವರ ಮಂದಿರದ ಪ್ರಸಾದ ಭೋಜನದಲ್ಲಿ ಊಟ ಮಾಡಿ ಬೀದಿಯ ಯಾವುದಾದರೂ ಮನೆ ಹೊರಾಂಗಣದ ಕಟ್ಟೆಯ ಮೇಲೆ ಮಲಗಿ ದಿನದೂಡುತ್ತಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಆಶ್ರಯಕ್ಕೆ ಕುಟುಂಬದ ನಂಟಿಲ್ಲ: ಅವಿವಾಹಿತರಾದ ಇವರಿಗೆ ಸಹೋದರ, ಸೋದರಿಯರು ಹೊರ ಊರಿನಲ್ಲಿ ಸುಖ ಸಂಸಾರ ನಡೆಸುತ್ತಿದ್ದು, ಇವರ ಬಗ್ಗೆ ಕಾಳಜಿ ಇಲ್ಲ ಎನ್ನಲಾಗುತ್ತಿದೆ. ಮೂಲ ಊರಿಗೆ ಹೋದರೆ ಅಲ್ಲಿ ಇದ್ದ ಕುಟುಂಬಸ್ಥರು ಇವರನ್ನು ಒಳಗೆ ತೆಗೆದುಕೊಳ್ಳದೆ ಕಳುಹಿಸುತ್ತಿದ್ದಾರೆ ಎಂದು ಇವರೇ ಹೇಳುತ್ತಿದ್ದು, ಕೈಯಲ್ಲಿ ಎರಡು ಚೀಲ ಹಿಡಿದು ಅತ್ತಿತ್ತ ಸುತ್ತುತ್ತ ಅತಂತ್ರರಾಗಿದ್ದಾರೆ. ಇವರ ಸಮಾಜದವರು ಅಥವಾ ಸಾಮಾಜಿಕ ಕಾರ್ಯ ಕೈಗೊಳ್ಳುವ ಸಂಘಟನೆ ಕೈಜೋಡಿಸಿ ಆಶ್ರಯ ನೀಡಲು ನೆರವಾಗಬೇಕಿದೆ.