ಗ್ರಾಮ ಸಡಕ್ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಲ್ಯಾಣ ಪಥ-ಪ್ರಗತಿ ಪಥಕ್ಕೆ ಚಾಲನೆ

| N/A | Published : Mar 09 2025, 01:46 AM IST / Updated: Mar 09 2025, 10:52 AM IST

ಗ್ರಾಮ ಸಡಕ್ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಲ್ಯಾಣ ಪಥ-ಪ್ರಗತಿ ಪಥಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಕ್ಕೆ ರಾಜಕೀಯ ಶಕ್ತಿ ನೀಡಿದ ನೆಲ ಕಲ್ಯಾಣ ಕರ್ನಾಟಕ ಪ್ರದೇಶ‌. ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಈ ಪ್ರದೇಶದ ಸರ್ವಾಂಗೀಣ ಪ್ರಗತಿಗೆ ಬರುವ ದಿನಗಳಲ್ಲಿ ಹೆಚ್ಚಿನ ಗಮನ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಡಾ। ಮಲ್ಲಿಕಾರ್ಜುನ ಖರ್ಗೆ ಹೇಳಿದರು.

 ಕಲಬುರಗಿ : ರಾಜ್ಯ ಸರ್ಕಾರಕ್ಕೆ ರಾಜಕೀಯ ಶಕ್ತಿ ನೀಡಿದ ನೆಲ ಕಲ್ಯಾಣ ಕರ್ನಾಟಕ ಪ್ರದೇಶ‌. ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಈ ಪ್ರದೇಶದ ಸರ್ವಾಂಗೀಣ ಪ್ರಗತಿಗೆ ಬರುವ ದಿನಗಳಲ್ಲಿ ಹೆಚ್ಚಿನ ಗಮನ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಡಾ। ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶನಿವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿಯಲ್ಲಿ ಕಲ್ಯಾಣ ಪಥ ಯೋಜನೆಯ ಚಾಲನಾ‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ, ಕಲ್ಯಾಣ ಕರ್ನಾಟಕ ಪ್ರದೇಶದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾದರಿಯಲ್ಲಿ 1,000 ಕೋಟಿ ರು.ವೆಚ್ಚದಲ್ಲಿ 1,166 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಲ್ಯಾಣ ಪಥ ಯೋಜನೆಗೆ ಚಾಲನೆ ನೀಡಿದರು.

ಕಲ್ಯಾಣ ಹಿಂದುಳಿಯಲು ಇಲ್ಲಿನ ನಾಯಕರೇ ಕಾರಣ:

ಹಳೇ ಮೈಸೂರು, ಬೆಂಗಳೂರು ಪ್ರದೇಶಕ್ಕೆ ಹೋಲಿಕೆ ಮಾಡಿದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ‌ ಹಿಂದುಳಿದಿರುವುದು ಕಟು ಸತ್ಯ. ಇಲ್ಲಿನ ನಾಯಕರ ಇಚ್ಛಾಸಕ್ತಿ ಕೊರತೆಯೇ ಇದಕ್ಕೆ ಕಾರಣ. ಹಿಂದಿನ ಸರ್ಕಾರದ ಯೋಜನೆಗಳು ಬೆಂಗಳೂರಿನಿಂದ ಶುರುವಾಗಿ ದಾವಣಗೆರೆ ದಾಟುತ್ತಿರಲಿಲ್ಲ. ಅದಕ್ಕೇ ಕಲ್ಯಾಣ ಹಿಂದುಳಿದು ಹೈರಾಣಾಗಿದೆ. ಸರ್ಕಾರ ಯಾವುದೇ ಯೋಜನೆ ಆರಂಭಿಸಬೇಕಾದರೆ ಕಲ್ಯಾಣದಿಂದ‌ ಆರಂಭಿಸಿದಲ್ಲಿ ಅದು ಕ್ರಾಂತಿಯಾಗಿ ಮೈಸೂರು, ಚಾಮರಾಜನಗರದ ಕೊಳ್ಳೆಗಾಲವರೆಗೂ ತಲುಪಲಿದೆ. ಇದರಿಂದ ಸರ್ಕಾರಕ್ಕೂ ಮತ್ತು ನಿಮಗೂ ಕಲ್ಯಾಣವಾಗಲಿದೆ. ಇನ್ನು ಮೈಸೂರಿನಿಂದ ಆರಂಭಿಸಿದರೆ ಅದು ಬೆಂಗಳೂರಿಗೆ ಬಂದು‌ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ಕೊಟ್ಟಿದ್ದೀವಿ ಎಂದು ಶಿವಕುಮಾರ್ ಹೇಳಿದ್ದಾರೆ. ನಮ್ಮ ಹಿಂದುಳಿದಿರುವಿಕೆ ಪ್ರಮಾಣ ನೋಡಿದಲ್ಲಿ ₹5 ಸಾವಿರ ಕೋಟಿ ಏನಕ್ಕೂ ಸಾಲದು, ₹1 ಲಕ್ಷ ಕೋಟಿ ಕೊಟ್ಟರೂ ಸಾಕಾಗೋದಿಲ್ಲ ಎಂದರು.

ಹಳ್ಳಿಗಳಲ್ಲಿ ರಸ್ತೆ ಸಂಪರ್ಕ ಕ್ರಾಂತಿ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರು.ಖರ್ಚು ಮಾಡಿ 1,150 ಕಿ.ಮೀ ಮತ್ತು ರಾಜ್ಯದಾದ್ಯಂತ ಪ್ರಗತಿಪಥ ಯೋಜನೆಯಡಿ 5,190 ಕೋಟಿ ರು.ಮೊತ್ತದಲ್ಲಿ 7,110 ಕಿ.ಮೀ ರಸ್ತೆ ನಿರ್ಮಿಸುವ ಐತಿಹಾಸಿಕ ನಿರ್ಣಯ‌ ಕೈಗೊಂಡಿದ್ದು, ಮುಂದಿನ‌ ದಿನದಲ್ಲಿ ಹಳ್ಳಿಯಲ್ಲಿ ರಸ್ತೆ ಕ್ರಾಂತಿ ನಿರೀಕ್ಷಿಬಹುದಾಗಿದೆ ಎಂದು ಹೇಳಿದರು.ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುತ್ತಿಲ್ಲ:

ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲವಾದ್ದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡಲು ಸಾಧ್ಯವಾಗುತ್ತಿಲ್ಲ. ಯಾದಗಿರಿ ಬಳಿ ರೈಲ್ವೆ ಬೋಗಿ ಕಾರ್ಖಾನೆ ಕಾರ್ಯಾನುಷ್ಠಾನಕ್ಕೆ ಹಲವು ಬಾರಿ ಪತ್ರ‌ ಬರೆದಿರುವೆ, ಕೇಂದ್ರದಿಂದ ಇನ್ನು ಉತ್ತರ ಬಂದಿಲ್ಲ‌ ಎಂದು ಬೇಸರದಿಂದ ನುಡಿದರು.

ಭೂಮಿ ಸ್ವಾಧೀನಪಡಿಸಿ ಕೊಡಿ:

ಹಿಂದೆ ತಾವು ಕೇಂದ್ರ ‌ಸಚಿವರಾಗಿದ್ದಾಗ ಸೋಲಾಪೂರ-ಅಕ್ಕಲಕ್ಕೋಟ್- ಅಫಜಲಪೂರ-ಯಾದಗಿರಿ-ರಾಯಚೂರು ಮಾರ್ಗವಾಗಿ ಬೆಂಗಳೂರು ಮತ್ತು ಬೀದರ್‌- ಕಲಬುರಗಿ- ಜೇವರ್ಗಿ- ಶಹಾಪುರ- ಸುರಪುರ-ಹಿರಿಯೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಘೋಷಿಸಿದ್ದು, ಭೂಸ್ವಾಧೀನ ಸೇರಿದಂತೆ ಇತರೆ ಕಾರಣದಿಂದ ಇನ್ನೂ ಅದು ಪೂರ್ಣಗೊಂಡಿಲ್ಲ. ಈ ಕುರಿತು ಕೇಂದ್ರದ‌ ರಸ್ತೆ ಅಭಿವೃದ್ಧಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಚರ್ಚಿಸಿದ್ದು, ಜಮೀನು ಭೂಸ್ವಾದೀನ ಮಾಡಿಕೊಟ್ಟಲ್ಲಿ ರಸ್ತೆ ನಿರ್ಮಿಸಿ ಕೊಡುವೆ ಎಂದಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಇವೆರಡು ರಸ್ತೆ ಮಾರ್ಗದ ಭೂಮಿ ಸ್ವಾಧೀನಪಡಿಸಿಕೊಂಡು ರಸ್ತೆ‌ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಲಹೆ‌ ನೀಡಿದ್ದರು.