ಕಲ್ಯಾಣದ ನರ್ಸರಿ ಮಾದರಿ ಶಾಲೆಗಳಿಗೆ ಆರಂಭದಲ್ಲೇ ಅಪಸ್ವರ

| Published : Jun 15 2024, 01:09 AM IST

ಸಾರಾಂಶ

ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ 36 ಸಾವಿರ ಶಿಕ್ಷಕರಿಲ್ಲ, ಶಾಲಾ ಕಟ್ಟಡಗಳಿಲ್ಲ, ಸರಕಾರ ಈಗಾಗಲೇ ಆರ್ಥಿಕ ಮುಗ್ಗಟ್ಟಿನ ಲ್ಲಿರುವ ನಕಲು ಯೋಜನೆಗಳಿಂದ ಇರುವ ಮೂಲ ಯೋಜನೆ (ಐಸಿಡಿಎಸ್) ಗೆ ಧಕ್ಕೆಯಾಗುವ ಹಾಗೆ ನಡೆದುಕೊಳ್ಳುತ್ತಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು, ಯಾವ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರಸಕ್ತ 2024-25ನೇ ಸಾಲಿನಲ್ಲಿ ಕಲಬುರಗಿ ವಿಭಾಗದ ಆಯ್ದ 1,008 ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಸಲು ಉದ್ದೇಶಿಸಿರುವ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ-ಯು.ಕೆ.ಜಿ.) ನರ್ಸರಿ ಮಾದರಿ ತರಗತಿಗಳಿಗೆ ಅಂಗನವಾಡಿ ನೌಕರರ ಸಂಘಟನೆ ಪ್ರಬಲ ವಿರೋಧ ವ್ಯಕ್ತಪಡಿಸಿದೆ.

ಈಗಾಗಲೇ ಅಂಗನವಾಡಿಯಲ್ಲಿ ದಾಖಲಾಗಿರೋ ಮಕ್ಕಳೇ ನರ್ಸರಿ ಶಾಲೆಗಳಿಗೂ ದಾಖಲಾಗಿ, ಮಕ್ಕಳ ಡಬ್ಬಲ್‌ ದಾಖಲೆ ಸಮಸ್ಯೆ ಕಾಡೋದಲ್ಲದೆ, 4 ವರ್ಷ ಮೇಲ್ಪಟ್ಟು ಮಕ್ಕಳು ಸರ್ಕಾರದ ನರ್ಸರಿ ಶಾಲೆಗೆ ಹೋದರೆ ಅಂಗನವಾಡಿಗಳಲ್ಲಿ ಮಕ್ಕಳ ಬರ ಉಂಟಾಗೋದಿಲ್ಲವೆ? ಮಕ್ಕಳ ಕೊರತೆ ಕಾಡಿದಾಗ ಅಂಗನವಾಡಿ ಬಾಗಿಲು ಮುಚ್ಚುವ ಹಂತ ತಲುಪುವ ಆತಂಕವೂ ಇದೆ ಎಂದು ಅಂಗನವಾಡಿ ನೌಕರರು ನರ್ಸರಿ ಶಾಲೆ ಆರಂಭಿಸೋದಕ್ಕೆ ವಿರೋಧಿಸುತ್ತಿದ್ದಾರೆ.

ಕಳೆದ 2 ವಾರದಿಂದ ಶಾಲಾ ಶಿಕ್ಷಣ ಇಲಾಖೆಯ ಕಕ ಭಾಗದ ಡಿಡಿಪಿಐ, ಮಹಿಳಾ, ಮಕ್ಕಳ ಇಲಾಖೆಯ ಜಿಲ್ಲಾ ಕಚೇರಿಗಳು, ಕಲ್ಯಾಣದ ಶಾಸಕರು, ಸಂಸದರ ಮನೆಗಳ ಮುಂದೆಲ್ಲ ಧರಣಿ ಮಾಡುತ್ತ ತಮ್ಮ ಆತಂಕ ಹೊರಹಾಕುತ್ತ ಸದರಿ ಅರ್ಲಿ ಚೈಲ್ಡ್‌ ಹುಡ್‌ ಕೇರ್‌ ಆಂಡ್‌ ಡೆವಲಪ್‌ಮೆಂಟ್‌- ಇಸಿಸಿಡಿ ಯೋಜನೆಯಡಿಯ ನರ್ಸರಿ ತರಗತಿಗಳನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.

ಇಂಟಿಗ್ರೇಟೆಡ್‌ ಚೈಲ್ಡ್‌ ಡೇವವಲಪ್ಮೆಂಟ್‌ ಸರ್ವಿಸ್‌- ಐಸಿಡಿಎಸ್‌ ಯೋಜನೆಯಡಿ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣದ ಜೊತೆಗೇ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತದಾದ್ಯಂತ 1975ರಲ್ಲಿ ಜಾರಿಗೆ ಬಂದ ಯೋಜನೆಯಡಿಯಲ್ಲಿ ಅಂಗನವಾಡಿಗಳು ಹುಟ್ಟಿಕೊಂಡಿವೆ. ಇಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕಲಿಸೋದರ ಜೊತೆಗೇ ಅವರ ಸರ್ವಾಂಗೀಣ ಅಭಿವೃದ್ಧಿ, ಪೌಷ್ಟಿಕತೆ ವಿಚಾರ, ಮನೆ ಪರಿಸರ ಇತ್ಯಾದಿಗಳನ್ನೆಲ್ಲ ಗಮನಿಸಲಾಗುತ್ತಿದೆ. ಆದರೆ ಹೊಸ ಮಾದರಿ ನರ್ಸರಿಗಳಲ್ಲಿ ಇವೆಲ್ಲಾ ಸಾಧ್ಯವೆ? ಅದಕ್ಕೇ ನರ್ಸರಿ ಶಾಲೆಗಳ ಆರಂಭ ಬೇಡ. ಈಗಿರೋ ಅಂಗನವಾಡಿಗಳನ್ನೇ ಬಲಪಡಿಸಿರೆಂದು ಆಗ್ರಹಿಸುತ್ತಿದ್ದಾರೆ.

ಈಗಾಗಲೇ ಅಂಗನವಾಡಿಗಳಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳ ಆರೈಕೆ ಸಾಗಿರೋದಾಗ ಮತ್ಯಾಕೆ ಕೆಕೆಆರ್‌ಡಿಬಿ ಅಡಿಯಲ್ಲಿ ನರ್ಸರಿ ಮಾದರಿ ಶಾಲೆಗಳು ಆರಂಭಿಸುತ್ತೀರಿ? ಕಲ್ಯಾಣ ಭಾಗದಲ್ಲಿ ಆಯ್ದ ಅಂಗನವಾಡಿಗಳಲ್ಲೇ 1008 ನರ್ಸರಿ ತರಗತಿಗಳನ್ನು ಆರಂಭಿಸಬಹುದಲ್ಲವೆ? ಎಂಬುದು ಅಂಗನವಾಡಿ ನೌಕರರ ಪ್ರಶ್ನೆಯಾಗಿದೆ.ಅಂಗನವಾಡಿಗಳು ಚೆನ್ನಾಗಿ ಕೆಲಸ ಮಾಡುತ್ತಿವೆಯೋ, ಇಲ್ಲವೋ ಎಂದು ಗುರುತಿಸಲು ಮಕ್ಕಳ ಸಂಖ್ಯಾಬಲ, ಸ್ಥಿಗತಿ ಅಧ್ಯಯನ ನಡೆಯಲಿ. ಪರಿಣಿತರ ತಂಡ ನೀಡುವ ಅಧ್ಯಯನ ವರದಿ ಬರೋವರೆಗೂ ಇಸಿಸಿಡಿ ಅಡಿಯಲ್ಲಿ 1008 ನರ್ಸರಿ ಶಾಲೆಗಳನ್ನು ಆರಂಭಿಸಬೇಡಿರೆಂದು ಅಂಗನವಾಡಿ ನೌಕರರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಮೊದಲೇ ಶಿಕ್ಷಣದಲ್ಲಿ ಹಿಂದುಳಿದಿರುವ ಕಲ್ಯಾಣ ನಾಡಿನಲ್ಲಿ ನರ್ಸರಿಗಳಿ ತರಗತಿಗಳನ್ನು ಆರಂಭಿಸಬೇಕಂಬ ಸರ್ಕಾರದ ಹೊಸ ಪ್ರಯತ್ನಕ್ಕೆ ಬಲವಾದ ವಿರೋಧವಂತೂ ವ್ಯಕ್ತವಾಗಿರೋದರಿಂದ ನರ್ಸರಿಗಳು ಈ ಶೈಕ್ಷಣಿಕ ವರ್ಷದಿಂದ ಶುರುವಾಗುವವೋ ಇಲ್ಲವೋ? ಎಂಬ ಆತಂಕವಂತು ಮೂಡಿದೆ. ಶಾಲಾ ಶಿಕ್ಷಣ ಇಲಾಖೆ, ಕೆಕೆಆರ್‌ಡಿಬಿ ಒಂದಾಗಿ ಅಂಗನವಾಡಿ ನೌಕರರ ಮನದಾಳದ ಆತಂಕ, ಶಂಕೆಗಳನ್ನು ಬಗೆಹರಿಸಿ ತಮ್ಮ ಹೊಸ ಪರಿಕಲ್ಪನೆಯಾದ ನರ್ಸರಿ ಶಾಲಾರಂಭಕ್ಕೆ ಮುಂದಾಗಬೇಕಿದೆ.ನರ್ಸರಿ ಶಾಲೆಗಳ ಆರಂಭಕ್ಕೆ ಶಾಲಾ ಶಿಕ್ಷಣ ಇಲಾಖೆ ನೀಡಿರುವ ಕಾರಣಗಳಿವು

1) ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು

2) ಕಲ್ಯಾಣ ನಾಡಿನ ಯಾವ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬುದೇ ಉದ್ದೇಶ

3) ಆರಂಭದಲ್ಲೇ ಶಿಕ್ಷಣದ ಭದ್ರ ಬುನಾದಿ ಹಾಕಲು ಪೂರ್ವ ಪ್ರಾಥಮಿಕ ತರಗತಿಗಳತ್ತ ಲಕ್ಷ

4) ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ‘ಆರಂಭಿಕ ಶಿಕ್ಷಣದ’ ಸೌಲಭ್ಯ ನೀಡುವ ಗುರಿ

5) ಇದಕ್ಕಾಗಿ ಕೆಕೆಆರ್‌ಡಿಬಿ ಯ ಅಕ್ಷರ ಅವಿಷ್ಕಾರದಲ್ಲಿ ಹಣಕಾಸು ನೆರವು ಪಡೆದು ಕ್ರಮ

6) ನರ್ಸರಿ ತರಗತಿಗಳ ಆರಂಭದಿಂದ ಈ ಭಾಗದ ಅಂಗನವಾಡಿಗಳ ಮೇಲಿನ ಹೊರೆ ತಗ್ಗಲಿದೆ

7) ಪೂರ್ವ ಪ್ರಾಥಮಿಕ ಹಂತದಲ್ಲಿ ಗುಣಾತ್ಮಕ ಶಿಕ್ಷಣ, ಕ್ರಿಯಾತ್ಮಕ ಚಟುವಟಿಕೆಗೆ ಹೆಚ್ಚಿನ ಅನುದಾನ ನಿರೀಕ್ಷೆ

8) ನರ್ಸರಿ ಶಾಲೆಗಳಿಗೆ ನಿಯಮಾನುಸಾರ ಅತಿಥಿ ಶಿಕ್ಷಕರು. ಮಕ್ಕಳ ಪಾಲನೆಗೆ ಆಯಾಗಳ ನೇಮಕನರ್ಸರಿ ಶಾಲೆಗಳ ವಿರೋಧಕ್ಕೆ ಅಂಗನವಾಡಿ ನೌಕರರು ನೀಡುವ ಕಾರಣಗಳಿವು

1) 4 ವರ್ಷದ ಮಕ್ಕಳು ನರ್ಸರಿಗೆ ಹೋದಲ್ಲಿ ಅಂಗನವಾಡಿಗಳಿಗೆ ಮಕ್ಕಳ ಬರ ಕಾಡೋದು ನಿಶ್ಚಿತ

2) ಮಕ್ಕಳಿಲ್ಲವೆಂಬ ಕಾರಣದಿಂದ ಅಂಗನವಾಡಿಗಳು ಬಾಗಿಲು ಮುಚ್ಚಲ್ಪಡುವ ಆತಂಕ

3) ಅಂಗನವಾಡಿಗೆ ದಾಖಲಾದ ಮಕ್ಕಳೇ ನರ್ಸರಿ ಶಾಲೆಗಳಿಗೂ ದಾಖಲಾಗಿ ಡಬ್ಬಲ್‌ ದಾಖಲೆ ಸಮಸ್ಯೆ

4) ಅಂಗನವಾಡಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ, ಅಪೌಷ್ಟಿಕತೆ ಎರಡೂ ಕಾಳಜಿ, ನರ್ಸರಿಯಲ್ಲಿ ಇದು ಅಸಾಧ್ಯ

5) ನರ್ಸರಿಗೆ ನೇಮಕವಾಗುವ ಈಗಿನ ಯುವಕ- ಯುವತಿಯರು ಪುಟಾಣಿಗಳೊಂದಿಗೆ ಬೆರೆಯೋದೇ ಆತಂಕ

6) ಅಂಗನವಾಡಿ ಕಾರ್ಯಕರ್ತೆಯರಲ್ಲಿ ಶೇ. 40 ರಷ್ಟು ಪದವೀಧರರು, ತಾಯ್ತನದ ಮನಸ್ಸಿರೋರು

7) ಹೊಸತಾಗಿರೋ ಯುವಕ- ಯುವತಿಯರಿಗೂ, ಅನುಭವಿ ಅಂಗನವಾಡಿಯವರಿಗೂ ವ್ಯತ್ಯಾಸ ಇರೋದಿಲ್ಲವೆ?

8) ಐಸಿಡಿಎಸ್‌ ಯೋಜನೆಯನ್ನೇ ನಕಲು ಮಾಡಿ ಇಸಿಸಿಡಿ ಜಾರಿ ತಂದು ಮೂಲಕ್ಕೆ ಪೆಟ್ಟು ನೀಡಿದರೆ ಹೇಗೆ?

9) 1008 ಅಂಗನವಾಡಿ ಗುರ್ತಿಸಿ ಅಲ್ಲೇ ಹೊಸ ನರ್ಸರಿ ಶಾಲೆ ಆರಂಭಿಸಿದರೆ ಅಭ್ಯಂತರವಿಲ್ಲ

10) ಶಿಕ್ಷಣ ಇಲಾಖೆಯ ನರ್ಸರಿ, ಕೆಪಿಎಸ್‌ ಶಾಲಾ ಮಕ್ಕಳ ಸ್ಥಿಗಿತಿ ಅಧ್ಯಯನಕ್ಕೆ ತಜ್ಞರ ಸಮೀತಿ ರಚಿಸಿ

11) ಅಧ್ಯಯನ ವರದಿ ಬರೋವರೆಗೂ ಇಸಿಸಿಡಿ ನರ್ಸರಿ ಶಾಲೆಗಳ ಆರಂಭ ಕೈಬಿಡಿವಿಭಾಗವಾರು ಮಕ್ಕಳ ದಾಖಲಾತಿ ನೋಟ: ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷ ವರೆಗಿನ ಮಕ್ಕಳ ದಾಖಲಾತಿ ಪ್ರಮಾಣ ನೋಡಿದಾಗ ಬೆಂಗಳೂರು ವಿಭಾಗದಲ್ಲಿ ಶೇ.40.94, ಧಾರವಾಡ ವಿಭಾಗದಲ್ಲಿ ಶೇ.61.61, ಮೈಸೂರು ವಿಭಾಗದಲ್ಲಿ ಶೇ.34.48 ಹಾಗೂ ಕಲಬುರಗಿ ವಿಭಾಗದಲ್ಲಿ ಅತಿ ಹೆಚ್ಚು ಶೇ.70.93 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂಗನವಾಡಿ ಮೇಲಿನ ಹೊರೆ ಸಹ ತಪ್ಪಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಲೆಕ್ಕಾಚಾರವಾಗಿದೆ.ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ 36 ಸಾವಿರ ಶಿಕ್ಷಕರಿಲ್ಲ, ಶಾಲಾ ಕಟ್ಟಡಗಳಿಲ್ಲ, ಸರಕಾರ ಈಗಾಗಲೇ ಆರ್ಥಿಕ ಮುಗ್ಗಟ್ಟಿನ ಲ್ಲಿರುವ ನಕಲು ಯೋಜನೆಗಳಿಂದ ಇರುವ ಮೂಲ ಯೋಜನೆ (ಐಸಿಡಿಎಸ್) ಗೆ ಧಕ್ಕೆಯಾಗುವ ಹಾಗೆ ನಡೆದುಕೊಳ್ಳುತ್ತಿದೆ. ಐಸಿಡಿಎಸ್ ಅಡಿಯಲ್ಲಿರುವ ಮಕ್ಕಳ ಸ್ಥಿತಿ-ಗತಿಯ ಬಗ್ಗೆ ಅಧ್ಯಯನ ಮಾಡಬೇಕು. ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು ಹಾಗೂ ನಮ್ಮ ಸಂಘದ ಆ ಪ್ರತಿನಿಧಿಗಳು ಮತ್ತು ಎರಡು ಇಲಾಖೆಯ ಪ್ರಮುಖರ ನ್ನೊಳಗೊಂಡ ಸಮಿತಿ ಅವರಿಂದ ವರದಿ ಪಡೆದು ಮುಂದುವರಿಯಬೇಕು.

- ಗೌರಮ್ಮ ಪಾಟೀಲ್‌, ಜಿಲ್ಲಾಧ್ಯಕ್ಷರು, ಅಂಗನವಾಡಿ ನೌಕರರ ಸಂಘಟನೆ. ಕಲಬುರಗಿ