ಸಾರಾಂಶ
ದುಡಿಯುವ ಕೈಗಳಿಗೆ ಕೆಲಸ ಕೊಡುವ ಕಾರ್ಯವಾಗಲಿ ಎಂದು ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು. ಬಸವಕಲ್ಯಾಣ ತಾಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಬಸವಕಲ್ಯಾಣ ಕ್ಷೇತ್ರ ಸಮಿತಿ ಮತ್ತು ಹಾರಕೂಡ ಮಠದ ಆಶ್ರಯದಲ್ಲಿ ಫೆ.10 ಮತ್ತು 11 ಎರಡು ದಿನಗಳ ಕಾಲ ಬಸವಕಲ್ಯಾಣ ಥೇರ್ ಮೈದಾನದ ಸಭಾ ಭವನದಲ್ಲಿ ದ್ವಿತೀಯ ಕಾಯಕ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ತತ್ವಗಳಲ್ಲಿ ಕಾಯಕ ಸಿದ್ಧಾಂತಕ್ಕೆ ಬಹಳ ಮಹತ್ವ ಇದೆ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಕಾರ್ಯ ಆಗಬೇಕೆಂದರು.
ದುಡಿಯುವ ಕೈಗೆ ಕೆಲಸ, ಸ್ಥಳೀಯ ಉತ್ಪನ್ನ ಸ್ಥಳೀಯರಿಗೆ ದೊರೆಯಬೇಕು, ದುಡಿದು ತಿನ್ನುವ ಸಂಸ್ಕೃತಿ ಬರಬೇಕು. ಸ್ವಾಭಿಮಾನಿ ಭಾರತಕ್ಕೆ ಕಾಯಕ ತತ್ವ ಮಹಾಮದ್ದಾಗಿದೆ ಕಾಯಕದ ಶಕ್ತಿ ಕೇಂದ್ರ ಬಸವಕಲ್ಯಾಣ ಆಗಬೇಕು ಎಂದು ತಿಳಿಸಿದರು.ಸಭೆಯ ನೇತೃತ್ವವನ್ನು ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರು ವಹಿಸಿದರು. ಸಭೆಯಲ್ಲಿ ಗಂಗಾಂಬಿಕ ಅಕ್ಕ, ಧನರಾಜ್ ತಾಳಂಪಳ್ಳಿ, ಮೇಘರಾಜ ನಾಗರಾಳೆ, ಚೆನ್ನಬಸವ ಬಳತೆ ಭಾಲ್ಕಿ, ಅರ್ಜುನ ಕನಕ, ಮಲ್ಲಯ್ಯ ಸ್ವಾಮಿ ಹಿರೇಮಠ ಮುಂತಾದವರು ಮಾತನಾಡಿದರು.
ಈ ಸಭೆಯಲ್ಲಿ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಗಳು, ಅನುಭವ ಮಂಟಪದ ಸಂಚಾಲಕರು ಶಿವಾನಂದ ಸ್ವಾಮಿ, ಬಿ.ಕೆ. ಹಿರೇಮಠ, ಸಿದ್ದರಾಮ ಗುದಗೆ, ಬಸವರಾಜ ಕೋರಕೆ, ಸುರೇಶ್ ಸ್ವಾಮಿ, ರಾಜಕುಮಾರ್ ಸಿರಗಾಪುರ, ಮನೋಹರ ಮೈಸೆ, ಮಲ್ಲಿನಾಥ ಹಿರೇಮಠ, ಮಲ್ಲಿಕಾರ್ಜುನ ಅಲಗೂಡ, ಶರಣು ಪವಾಡಶೆಟ್ಟಿ, ರಾಚಯ್ಯ ಸ್ವಾಮಿ, ಸುನಿಲ ಭಾಲ್ಕೆ ನೂರಾರು ಭಕ್ತರು ಹಾಜರಿದ್ದರು.ಕಾಯಕ ಉತ್ಸವದ ಯಶಸ್ವಿಗಾಗಿ ಹತ್ತು ಹಲವಾರು ಸಮಿತಿ ರಚಿಸಿ ರೂಪರೇಷೆ ಹಾಕಲಾಯಿತು. ಸೂರ್ಯಕಾಂತ ಮಠ ಸ್ವಾಗತಿಸಿದರು, ಡಾ. ಮಹೇಶ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರೆ ರಮೇಶ್ ರಾಜೋಳೆ ನಿರೂಪಿಸಿ ವಂದಿಸಿದರು.