ಸಾರಾಂಶ
ಹಂಪನಗೌಡ ಬಾದರ್ಲಿಯವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಕನ್ನಡಪ್ರಭ ವಾರ್ತೆ ಸಿಂಧನೂರು
ಪಟ್ಟಣದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಅ.4 ರಿಂದ 9 ದಿನಗಳವರೆಗೆ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.ನಗರದ ಟೌನ್‌ಹಾಲ್‌ನಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಅ.4 ರಿಂದ ‘ಕಲ್ಯಾಣ ದಸರಾ’ ಆರಂಭಗೊಳ್ಳಲಿದ್ದು, ನಿರಂತರ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಕಲ್ಯಾಣ ದಸರಾ ಹೆಸರಿನೊಂದಿಗೆ ಉದ್ಘಾಟನೆಯಾಗಲಿದ್ದು, ನಂತರ ಯುವ ದಸರಾ, ಕ್ರೀಡಾ ದಸರಾ, ಗಾಯನ ದಸರಾ, ಸಾಹಿತ್ಯ ದಸರಾ, ಮಹಿಳಾ ದಸರಾ, ರೈತ ದಸರಾ ಆಚರಿಸಿ ಒಂಭತ್ತನೇ ದಿನದಂದು ಸಮಾರೋಪ ನಡೆಯಲಿದೆ. ಸಿಂಧನೂರಿನ ವಿವಿಧ ಪಕ್ಷಗಳು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಸೇರಿ ಎಲ್ಲಾ ಸಮುದಾಯಗಳ ಮುಖಂಡರು ಸರ್ವರೂ ಸಮಭಾವದಿಂದ ಸಿಂಧನೂರು ದಸರಾ ಉತ್ಸವಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಕಾರ್ಯಕ್ರಮದ ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗಿದೆ. ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ, ಮಹಾರಾಷ್ಟ್ರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಇನ್ಪೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯರಾದ ಸುಧಾಮೂರ್ತಿಯವರನ್ನು ಆಹ್ವಾನಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಕೊನೆಯ ದಿನ ಅಂಬಾರಿಯಲ್ಲಿ ಅಂಬಾದೇವಿ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಡಿವೈಎಸ್‌ಪಿ ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ, ಸಮುದಾಯದ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ದೇವೆಂದ್ರಗೌಡ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.