ಕಲ್ಯಾಣ ಕರ್ನಾಟಕ ಭಾಗವು ಹಲವು ವರ್ಷಗಳ ಕಾಲ ವಿವಿಧ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಹಿನ್ನಡೆ ಎದುರಿಸಿತ್ತು.
ಕಂಪ್ಲಿ: ಕಲ್ಯಾಣ ಕರ್ನಾಟಕ ಭಾಗದ ಯುವಜನತೆಗೆ ಸಂವಿಧಾನದ 371(ಜೆ) ಕಲಂ ನೀಡಿರುವ ವಿಶೇಷ ಸೌಲಭ್ಯ ಹಾಗೂ ಮೀಸಲಾತಿ ಮಹತ್ವದ ವರದಾನವಾಗಿದ್ದು, ಯುವಕರು ಇದರ ಪರಿಣಾಮಕಾರಿ ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕಾಡಳಿತದಿಂದ ಆಯೋಜಿಸಿದ್ದ 79ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗವು ಹಲವು ವರ್ಷಗಳ ಕಾಲ ವಿವಿಧ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಹಿನ್ನಡೆ ಎದುರಿಸಿತ್ತು. ಈ ಭಾಗದ ಜನರ ಹೋರಾಟ, ತ್ಯಾಗ ಮತ್ತು ನಿರಂತರ ಪ್ರಯತ್ನಗಳ ಫಲವಾಗಿ ವಿಮೋಚನೆ ಸಾಧ್ಯವಾಯಿತು. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವು ವಿಶೇಷ ಯೋಜನೆ ಜಾರಿಗೊಳಿಸಿದೆ. ಅದರಲ್ಲೂ 371(ಜೆ) ಕಲಂ ಮೂಲಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ದೊರೆಯುತ್ತಿರುವ ವಿಶೇಷ ಅವಕಾಶಗಳು ಈ ಭಾಗದ ಯುವಜನತೆಯ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಕಂಪ್ಲಿ ಭಾಗದ ಅಳವಂಡಿ ಶಿವಮೂರ್ತಿಸ್ವಾಮಿಗಳು ಸೇರಿದಂತೆ ಅನೇಕ ಮಹನೀಯರು ಅಹರ್ನಿಶಿ ಶ್ರಮಿಸಿದ್ದಾರೆ. ಅವರ ಹೋರಾಟ ಮತ್ತು ತ್ಯಾಗ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಲ್ಯಾಣ ಕರ್ನಾಟಕದ ವಿಮೋಚನೆಯು ಈ ಭಾಗಕ್ಕೆ ಮಾತ್ರ ಸೀಮಿತವಾದ ಘಟನೆಯಲ್ಲ. ಭಾರತದ ಏಕೀಕರಣದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಘಟನೆಯಾಗಿದೆ ಎಂದು ಹೇಳಿದರು.ಯುವಜನತೆ 371(ಜೆ) ಸೌಲಭ್ಯ ಕೇವಲ ಮೀಸಲಾತಿಗೆ ಸೀಮಿತಗೊಳಿಸದೆ ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಕೌಶಲಾಭಿವೃದ್ಧಿ ಹಾಗೂ ಉನ್ನತ ಹುದ್ದೆ ಪಡೆಯಲು ಬಳಸಿಕೊಳ್ಳಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುನ್ನಡೆ ಸಾಧಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಯುವಕರು ಕೊಡುಗೆ ನೀಡಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಕರೆ ನೀಡಿದರು.
ರಜಾಕಾರರ ದೌರ್ಜನ್ಯ ನೆನಪುಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕು ಗೌರವಾಧ್ಯಕ್ಷ ಕರೇಕಲ್ ಮನೋಹರ ಮಾತನಾಡಿ, 1947ರ ಆ.15ರಂದು ಭಾರತ ಸ್ವಾತಂತ್ರ್ಯ ಪಡೆದರೂ ಕಲ್ಯಾಣ ಕರ್ನಾಟಕದ ಹೈದರಾಬಾದ್ ಕರ್ನಾಟಕ ಭಾಗಕ್ಕೆ ತಕ್ಷಣ ಸ್ವಾತಂತ್ರ್ಯ ದೊರೆಯಲಿಲ್ಲ. ಈ ಭಾಗದ ಜನರು ರಜಾಕಾರರ ದೌರ್ಜನ್ಯ ಹಾಗೂ ಭಯದ ವಾತಾವರಣದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದಲ್ಲಿ ನಡೆದ ದಿಟ್ಟ ಪೊಲೀಸ್ ಕಾರ್ಯಾಚರಣೆ (ಆಪರೇಷನ್ ಪೋಲೋ) ಬಳಿಕ ಹೈದರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಇದರಿಂದ ಕಲ್ಯಾಣ ಕರ್ನಾಟಕ ಭಾಗವೂ ವಿಮೋಚನೆಗೊಂಡು ಭಾರತದೊಂದಿಗೆ ಏಕೀಕರಣವಾಯಿತು. ಈ ಐತಿಹಾಸಿಕ ಹೋರಾಟದಲ್ಲಿ ತ್ಯಾಗ ಮಾಡಿದ ಮಹನೀಯರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಭಾರ ಉಪ ತಹಸೀಲ್ದಾರ್ ಎಸ್.ಡಿ.ರಮೇಶ್, ಶಿರಸ್ತೆದಾರ್ ಜಿ. ಪಂಪಾಪತಿ, ಆಹಾರ ನಿರೀಕ್ಷಕ ಬಿ. ವಿರುಪಾಕ್ಷಗೌಡ, ನಿಲಯ ಪಾಲಕ ಕೆ. ವಿರುಪಾಕ್ಷಿ, ವಿಎಒಗಳಾದ ಎಚ್.ವಿ. ಮಂಜುನಾಥ, ಲಕ್ಷ್ಮಣನಾಯ್ಕ, ಕೆ.ಮಂಜುನಾಥ, ಜ್ಯೋತೆಪ್ಪ, ರಾಘವೇಂದ್ರ, ಗಿರೀಶ್‌ಬಾಬು, ವನಿತಾ, ರೂಪಿಣಿ, ರಾಧಾ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.