ಉಕ್ಕಿನ ಮನುಷ್ಯ ಅರ್ಧಾರ ವಲ್ಲಭಬಾಯಿ ಪಟೇಲ್‌ರ ಧೀರೋದ್ಧಾತ ನಡೆಯಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ನಿಜಾಮರ ಕಪಿಮುಷ್ಠಿಯಿಂದ ಸ್ವತಂತ್ರ ದೊರೆಯಿತು. ಇಂತಹ ದಿನವನ್ನು ನಾವು ಸಂಭ್ರಮದಿಂದ ಆಚರಿಸಬೇಕಾಗಿದೆ.

ಕಾರಟಗಿ:

ಕಲ್ಯಾಣ ಕರ್ನಾಟಕ ಉತ್ಸವವನ್ನು ಸೆ.17ರಂದು ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಉಪ ತಹಸೀಲ್ದಾರ್‌ ಜಗದೀಶ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಆವರಣದ ಶ್ರೀಸದ್ದೇಶ್ವರ ರಂಗ ಮಂದಿರದ ಮುಂದಿನ ಬೃಹತ್ ಮೈದಾನದಲ್ಲಿ ವಿಮೊಚನಾ ದಿನಾಚರಣೆ ಆಚರಿಸಲು ಸಿದ್ಧತೆ ಕೈಗೊಳ್ಳಲಾಗುವುದು. ಅಂದು ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸ್ಕೌಟ್ಸ್, ಗೈಡ್ಸ್ ಮತ್ತು ವಿವಿಧ ಶಾಲಾ ಮಕ್ಕಳಿಂದ ಗೌರವ ವಂದನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ಉಕ್ಕಿನ ಮನುಷ್ಯ ಅರ್ಧಾರ ವಲ್ಲಭಬಾಯಿ ಪಟೇಲ್‌ರ ಧೀರೋದ್ಧಾತ ನಡೆಯಿಂದಾಗಿ ನಮ್ಮ ಭಾಗಕ್ಕೆ ನಿಜಾಮರ ಕಪಿಮುಷ್ಠಿಯಿಂದ ಸ್ವತಂತ್ರ ದೊರೆಯಿತು. ಇಂತಹ ದಿನವನ್ನು ನಾವು ಸಂಭ್ರಮದಿಂದ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೇಕಾದ ಸಿದ್ಧತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕೆಂದು ಉಪ ತಹಸೀಲ್ದಾರ್‌, ಇಲಾಖೆಗಳಿಗೆ ನೀಡಿದ ಜವಾಬ್ದಾರಿಯನ್ನು ಬದ್ಧತೆಯಿಂದ ಮಾಡಬೇಕೆಂದು ನಿರ್ದೇಶಿಸಿದರು.

ಕುಡಿಯುವ ನೀರಿನ ವ್ಯವಸ್ಥೆ, ಆ್ಯಂಬುಲೆನ್ಸ್‌, ವೈದ್ಯರ ನಿಯೋಜನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚಿಸಿದರು.

ಈ ವೇಳೆ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಶಿರಸ್ತೆದಾರ ಸಾವಿತ್ರಿಬಾಯಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ, ಶಿಕ್ಷಣ ಸಂಯೋಜಕ ರಾಘವೇಂದ್ರ, ಪುರಸಭೆ ಅಧಿಕಾರಿ ಮಲ್ಲಮ್ಮ, ರೈತ ಸಂಪರ್ಕ ಅಧಿಕಾರಿ ನಾಗರಾಜ ರ‍್ಯಾವಳದ, ಸಿಆರ್‌ಪಿ ತಿಮ್ಮಣ್ಣ ನಾಯಕ, ಪಶು ವೈದ್ಯ ಚನ್ನಬಸಪ್ಪ ಹಳ್ಳದ, ಸಾರಿಗೆ ನಿಯಂತ್ರಕ ಪರಶುರಾಮ ಬಣ್ಣದ, ವಾರ್ಡನ್ ಗಂಗಪ್ಪ, ಎಸ್‌ಎಸ್‌ಐ ಬಸವರಾಜ, ವಿದ್ಯಾಶ್ರೀ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.